ರಾಯಪುರ (ಛತ್ತೀಸ್‌ಗಢ):"ದೇಶದಲ್ಲಿ ಅತ್ಯಾಚಾರ, ಕೊಲೆ, ಸುಲಿಗೆ, ದರೋಡೆಯಂತಹ ಪ್ರಕರಣಗಳಿಗೆ ಮದ್ಯಪಾನವೇ ಕಾರಣ. ಇದರ ನಿಯಂತ್ರಣಕ್ಕಾಗಿ ಮದ್ಯಪಾನದ ಬದಲಾಗಿ ಗಾಂಜಾವನ್ನು ನೀಡಿ". ಇದು ಛತ್ತೀಸ್ಗಢದ ಬಿಜೆಪಿ ಶಾಸಕ ಕೃಷ್ಣಮೂರ್ತಿ ಬಂಧಿ ಅವರ ಹೊಸ ಸಂಶೋಧನೆ. ದೇಶದಲ್ಲಿ ಅಪರಾಧ ಕೃತ್ಯಗಳನ್ನು ತಡೆಗಟ್ಟಲು "ಮಹತ್ವದ ಸಲಹೆ"ಯನ್ನು ನೀಡಿ ವಿವಾದಕ್ಕೀಡಾಗಿದ್ದಾರೆ.
ಮದ್ಯಪಾನದಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಆದರೆ ಸೆಣಬಿನ ಮಾದಕ ವಸ್ತು ಮತ್ತು ಗಾಂಜಾ ಸೇವನೆ ಅಪರಾಧಗಳನ್ನು ಹೆಚ್ಚಿಸುವುದಿಲ್ಲ ಎಂಬ ಬಿಜೆಪಿ ಶಾಸಕನ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದ್ದು, ಸಾರ್ವಜನಿಕ ಪ್ರತಿನಿಧಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾನೆ, ಚಟಕ್ಕೆ ಉತ್ತೇಜನ ನೀಡುತ್ತಿದ್ದಾನೆ ಎಂದು ಕಿಡಿಕಾರಿದೆ.
ಮದ್ಯಪಾನದ ಬದಲಾಗಿ ಗಾಂಜಾ ನೀಡಿ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಈ ಹಿಂದೆ ವಿಧಾನಸಭೆಯಲ್ಲಿ ಈ ಬಗ್ಗೆ ಒಮ್ಮೆ ಚರ್ಚಿಸಿದ್ದೆ. ಅತ್ಯಾಚಾರ, ಕೊಲೆ, ಜಗಳಕ್ಕೆ ಎಲ್ಲೋ ಮದ್ಯಪಾನವೇ ಕಾರಣ ಎಂದು ನನಗೆ ಅನ್ನಿಸಿದೆ. ಗಾಂಜಾ ಸೇವಿಸುವವರು ಅತ್ಯಾಚಾರ, ಕೊಲೆ ಮತ್ತು ಡಕಾಯಿತಿ ನಡೆಸಿದ್ದಾರೆಯೇ? ಎಂದು ಸದನವನ್ನು ಪ್ರಶ್ನಿಸಿದ್ದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.