ನವದೆಹಲಿ:ಭೂಮಿಯಿಂದ ಚಂದ್ರನ ಗ್ರಹಕ್ಕೆ ಶುಕ್ರವಾರ ಉಡಾವಣೆಗೊಂಡ ಚಂದ್ರಯಾನ 3 ಮಿಷನ್ ಬಾಹ್ಯಾಕಾಶ ನೌಕೆಯು ಉತ್ತಮವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ತಿಳಿಸಿದೆ. ಜತೆಗೆ ಬೆಂಗಳೂರಿನಲ್ಲಿರುವ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC)ನಲ್ಲಿ ಚಂದ್ರಯಾನ 3 ಗಗನ ನೌಕೆಯು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ ಎಂದು ಇಸ್ರೋ ಹೇಳಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಜಿಎಸ್ಎಲ್ವಿ ಮಾರ್ಕ್ 3 (ಎಲ್ವಿಎಂ 3) ಹೆವಿ ಲಿಫ್ಟ್ ಉಡಾವಣಾ ವಾಹನದಿಂದ ಚಂದ್ರಯಾನ-3 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇಸ್ರೋದ ಬೆಂಗಳೂರಿನ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಕೇಂದ್ರವು ಬಾಹ್ಯಾಕಾಶ ನೌಕೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಚಂದ್ರಯಾನ 3 ಗಗನ ನೌಕೆಯ ಬಗ್ಗೆ ಇಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.
'ಚಂದ್ರಯಾನ 3 ಮಿಷನ್ ಅಪ್‌ಡೇಟ್ | ನೌಕೆ ಸುರಕ್ಷಿತವಾಗಿದೆ. ಮೊದಲ ಕಕ್ಷೆಯನ್ನು ಏರಿಸುವ ಕುಶಲತೆಯನ್ನು (ಭೂಮಿಯ ಫೈರಿಂಗ್-1) ಬೆಂಗಳೂರಿನ ಇಎಸ್ಟಿಆರ್ಎಸಿ ಕೇಂದ್ರದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಾಗಿದೆ. ಬಾಹ್ಯಾಕಾಶ ನೌಕೆಯು ಈಗ 41762 ಕಿಮೀ x 173 ಕಿಮೀ ಕಕ್ಷೆಯಲ್ಲಿದೆ ಎಂದು ಇಸ್ರೋ ಶನಿವಾರ ರಾತ್ರಿ ಟ್ವೀಟ್ ಮಾಡಿದೆ.
ಇದಕ್ಕೂ ಮುನ್ನ ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಸ್.ಉನ್ನಿಕೃಷ್ಣನ್ ನಾಯರ್ ಮಾತನಾಡಿ, ಇಸ್ರೋ ವಿಜ್ಞಾನಿಗಳು ಚಂದ್ರಯಾನ 3ಗೆ ಜೋಡಿಸಲಾದ ಆನ್‌ಬೋರ್ಡ್ ಥ್ರಸ್ಟರ್‌ಗಳನ್ನು ಶನಿವಾರದಿಂದ ಹಾರಿಸಲಿದ್ದಾರೆ. ಇದು ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡಲು ನಿರ್ಣಾಯಕ 41 ದಿನದ ಹಂತದಲ್ಲಿ ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ದೂರಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದ್ದಾರೆ.
ಜೊತೆಗೆ ಉಡಾವಣಾ ವಾಹನವು ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಚಂದ್ರಯಾನ 3ಗೆ ಅಗತ್ಯವಾದ ಆರಂಭಿಕ ಪರಿಸ್ಥಿತಿ ಅತ್ಯಂತ ನಿಖರವಾಗಿ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 3 ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಮಧ್ಯಾಹ್ನ 2.35ಕ್ಕೆ ಉಡಾವಣೆಗೊಂಡ 17 ನಿಮಿಷಗಳ ನಂತರ ಉಪಗ್ರಹವು ನಿಖರವಾಗಿ ಕಕ್ಷೆಗೆ ಸೇರಿತ್ತು. ಪ್ರಯೋಗದ ಮೊದಲ ಹಂತವು ನೂರಕ್ಕೆ ನೂರು ಪ್ರತಿಶತ ಯಶಸ್ವಿಯಾಗಿರುವುದರಿಂದ ಬಾಹ್ಯಾಕಾಶ ನೌಕೆಯು ಸಹ ಉತ್ತಮ ಆರೋಗ್ಯದಲ್ಲಿದೆ. ಅದರ ಪ್ರೊಪಲ್ಷನ್ ಮತ್ತು ಅದರ ಒಳಗಿನ ತರ್ಕವನ್ನು ಬಳಸಿಕೊಂಡು ಚಂದ್ರನತ್ತ ಹೋಗಲು ಸಾಧ್ಯವಾಗುತ್ತದೆ ಎಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಚಂದ್ರನ ಮೇಲೆ ಮಾನವ ವಾಸಸ್ಥಾನದ ಸಾಧ್ಯತೆಗಳ ಬಗ್ಗೆ ಚಂದ್ರಯಾನ 3 ಅನ್ವೇಷಿಸಲಿದೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್