ಶಿಮ್ಲಾ:ನಾಳೆನಡೆಯಲಿರುವ ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜಾತಿ ರಾಜಕೀಯ ಅತ್ಯಂತ ನಿರ್ಣಯಕ ಪಾತ್ರ ವಹಿಸಲಿದೆ. ಉತ್ತರ ಪ್ರದೇಶ - ಬಿಹಾರದಲ್ಲಿನ ಮಾದರಿಯಲ್ಲಿ ಇಲ್ಲಿ ಜಾತಿ ಸಮೀಕರಣ ನಡೆಯದೇ ಹೋದರೂ ಸಿಎಂ ಜೈ ರಾಮ್ ಠಾಕೂರ್ ಸೇರಿದಂತೆ ಆರರಲ್ಲಿ ಐದು ಮಂದಿ ರಜಪೂತ್ ಸಮುದಾಯಕ್ಕೆ ಸೇರಿದವರು. ಠಾಕೂರ್ ಹೊರತಾಗಿ ರಾಜ್ಯದ ಮೊದಲ ಸಿಎಂ ಆಗಿದ್ದ ಯಶವಂತ್ ಪರ್ಮಾರ್ ಕೂಡ ರಾಜಪೂತ್ ಸಮುದಾಯಕ್ಕೆ ಸೇರಿದ್ದವರಾಗಿದ್ದು, ನಾಲ್ಕು ಬಾರಿ ಅಧಿಕಾರದಲ್ಲಿದ್ದರು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.
ಆರು ಬಾರಿ ಸಿಎಂ ಆಗಿದ್ದ ವೀರಭದ್ರ ಸಿಂಗ್:ರಾಮಲಾಲ್ ಠಾಕೂರ್ ಎರಡು ಬಾರಿ ಹಿಮಾಚಲ ಸಿಎಂ ಆಗಿದ್ದರೆ, ಕಾಂಗ್ರೆಸ್ನ ವೀರ್ಭದ್ರ ಸಿಂಗ್ ಆರು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇನ್ನು ಬಿಜೆಪಿಯ ಪ್ರೇಮ್ ಕುಮಾರ್ ಧುಮಲ್ ಎರಡು ಬಾರಿ ರಾಜ್ಯದ ಸಿಎಂ ಆಗಿ ಚಿಕ್ಕಾಣಿ ಹಿಡಿದಿದ್ದರು. ಶಾಂತಕುಮಾರ್ ರಾಜ್ಯದಲ್ಲಿ ಅಧಿಕಾರ ನಡೆಸಿದ ಏಕೈಕ ಬ್ರಾಹ್ಮಣ ಸಿಎಂ. ಇವರು ಎರಡು ಬಾರಿ ಸಿಎಂ ಆಗಿದ್ದರು.
ಹಿಮಾಚಲದಲ್ಲಿ ಶೇ 50 ರಷ್ಟು ಮೇಲ್ವರ್ಗದ ಜನ:2011ರ ಜನಗಣತಿ ಅನುಸಾರ ಹಿಮಾಚಲ ಪ್ರದೇಶದಲ್ಲಿ ಶೇ 50ರಷ್ಟು ಮಂದಿ ಮೇಲ್ಜಾತಿಗೆ ಸೇರಿದ ಮತದಾರರೇ ಇದ್ದಾರೆ. ಇದರಲ್ಲಿ ರಜಪೂತರು ಶೇ 32.72ರಷ್ಟಿದ್ದರೆ, ಬ್ರಾಹ್ಮಣರು ಶೇ 18ರಷ್ಟಿದ್ದಾರೆ. ಇನ್ನು 25.22ರಷ್ಟು ಜನ ಪರಿಶಿಷ್ಟ ಜಾತಿಯವರಿದ್ದರೆ, ಶೇ 5.71ರಷ್ಟು ಜನ ಪ. ಪಂಗಡಕ್ಕೆ ಸೇರಿದವರು. ಒಬಿಸಿ ಶೇ 13.25ರಷ್ಟಿದ್ದರೆ, ಹಿಂದುಳಿದ ವರ್ಗದವರು ಶೇ 4.83ರಷ್ಟು ಮಂದಿ ರಾಜ್ಯದಲ್ಲಿದ್ದಾರೆ
ಡಿ.13ಕ್ಕೆ 13ನೇ ವಿಧಾನಸಭೆ ಅವಧಿ ಮುಕ್ತಾಯ:ಹಿಮಾಚಲ ಪ್ರದೇಶದ 13ನೇ ವಿಧಾನಸಭಾ ಅವಧಿ ಇದೇ ಡಿಸೆಂಬರ್ನಲ್ಲಿ ಅಂತ್ಯವಾಗುತ್ತಿದೆ. ಈ ಸರ್ಕಾರದಲ್ಲಿ ಬಹುತೇಕ ಶಾಸಕರು ರಜಪೂತ್ ಸಮುದಾಯಕ್ಕೆ ಸೇರಿದ್ದವರಾಗಿದ್ದಾರೆ. ಒಟ್ಟು 68 ಸ್ಥಾನ ಹೊಂದಿದ್ದು, ಇದರಲ್ಲಿ 48 ಸ್ಥಾನ ಮೀಸಲು ರಹಿತವಾಗಿದೆ. ಇದರಲ್ಲಿ ರಜಪೂತ್ ಸಮುದಾಯಕ್ಕೆ ಸೇರಿದ 33 ಶಾಸಕರಿದ್ದು, ಇದರಲ್ಲಿ 18 ಮಂದಿ ಬಿಜೆಪಿ ಶಾಸಕರು. ಉಳಿದ 12 ಮಂದಿ ಕಾಂಗ್ರೆಸ್ಸಿಗರಾದರೆ, ಒಬ್ಬರು ಸಿಪಿಐಎಂ, ಮತ್ತಿಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿದ್ದಾರೆ.
ರಜಪೂತ್ ಸಮುದಾಯದ ಪ್ರಾಬಲ್ಯ:ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ- ಕಾಂಗ್ರೆಸ್ ನೇರ ಹಣಾಹಣಿ ನಡೆಸಲಿದ್ದು, ಎರಡೂ ಪಕ್ಷದರೂ 28 ಕ್ಷೇತ್ರಗಳಲ್ಲಿ ರಜಪೂತ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ. ಈ ಮೂಲಕ ಜಾತಿ ರಾಜಕಾರಣ ಅದರಲ್ಲೂ ರಜಪೂತ ಸಮುದಾಯದ ಪ್ರಭಾವವನ್ನು ತೋರಿಸಿದೆ. ಸಿಎಂ ಜೈರಾಮ್ ಠಾಕೂರ್ ಸೇರಿದಂತೆ 12 ಕ್ಯಾಬಿನೆಟ್ ಸದಸ್ಯರಲ್ಲಿ ಆರು ಶಾಸಕರಾದ ಮಹೇಂದ್ರ ಸಿಂಗ್, ವಿರೇಂದ್ರ ಕನ್ವರ್, ಬಿಕ್ರಂ ಸಿಂಗ್, ಗೋಬಿಂದ್ ಸಿಂಗ್ ಠಾಕೂರ್, ರಾಕೇಶ್ ಪಾಥನಿಯ ರಜಪೂತ್ ಸಮುದಾಯದವರಾಗಿದ್ದಾರೆ.