ಕೊಚ್ಚಿ(ಕೇರಳ): ಅಜೆಂಡಾವೊಂದರ ಭಾಗವಾಗಿ ನನ್ನ ಮೇಲೆ ದೂರು ದಾಖಲು ಮಾಡಲಾಗಿದೆ. ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ನಟಿ, ನಿರ್ಮಾಪಕಿ ಆಯಿಷಾ ಸುಲ್ತಾನಾ ಗಂಭೀರ ಆರೋಪ ಮಾಡಿದ್ದಾರೆ.
ದೇಶದ್ರೋಹ ಆರೋಪ ಪ್ರಕರಣದಲ್ಲಿ ಲಕ್ಷದ್ವೀಪದ ರಾಜಧಾನಿ ಕವರತ್ತಿಯಲ್ಲಿ ಪೊಲೀಸರ ವಿಚಾರಣೆ ಎದುರಿಸಿ, ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದ ನಂತರ ಆಯಿಷಾ ಸುಲ್ತಾನಾ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.
ಲಕ್ಷದ್ವೀಪದಿಂದ ಹಿಂದಿರುಗಿರುವುದರಿಂದ ನನಗೆ ತುಂಬಾ ಸಂತೋಷವಾಗಿದೆ. ನ್ಯಾಯಾಲಯವು ನನಗೆ ಜಾಮೀನು ನೀಡಿರುವುದಕ್ಕೆ ಖುಷಿಯಾಗಿದೆ. ಲಕ್ಷದ್ವೀಪದಲ್ಲಿ ಕ್ವಾರಂಟೈನ್ ಉಲ್ಲಂಘಿಸಿದ್ದೇನೆ ಎಂಬುದು ಸುಳ್ಳು. ಸಮಸ್ಯೆಗಳಿಂದ ಆದಷ್ಟು ಬೇಗ ಹೊರಬರುತ್ತೇನೆ ಎಂದು ಆಯಿಷಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪೊಲೀಸರು ನನ್ನ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ನನ್ನ ಮತ್ತು ನನ್ನ ತಾಯಿಯ ಬ್ಯಾಂಕ್ ಅಕೌಂಟ್ಗಳ ಮಾಹಿತಿ ಪಡೆದುಕೊಂಡಿದ್ದಾರೆ. ನನ್ನ ಮೊಬೈಲ್ ಫೋನ್ ಇನ್ನೂ ಪೊಲೀಸರ ಬಳಿಯೇ ಇದೆ. ಯಾವಾಗ ಬೇಕಾದರೂ ಅವರು ನನ್ನನ್ನು ವಿಚಾರಣೆಗೆ ಕರೆಯಬಹುದು ಎಂದು ಆಯಿಷಾ ಸುಲ್ತಾನಾ ಮಾಹಿತಿ ನೀಡಿದರು.
ಇದನ್ನೂ ಓದಿ:'ಕಬ್ಜ' ಚಿತ್ರದ ವಿಶೇಷ ಪೋಸ್ಟರ್ ರಿಲೀಸ್.. ಹಾಲಿವುಡ್ ಸ್ಟೈಲ್ನಲ್ಲಿ ಉಪ್ಪಿ-ಕಿಚ್ಚ ಮಿಂಚಿಂಗ್
ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಕೋವಿಡ್-19 ಬಗ್ಗೆ ಸುಳ್ಳು ಸುದ್ದಿ ಹರಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ನೀಡಿದ ದೂರಿನ ಅನ್ವಯ ನಟಿ ಆಯಿಷಾ ಸುಲ್ತಾನಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಈಗ ಕೇರಳ ಹೈಕೋರ್ಟ್ ಆಯಿಷಾ ಸುಲ್ತಾನಾಗೆ ನಿರೀಕ್ಷಣಾ ಜಾಮೀನು ನೀಡಿದೆ.