ಪಣಜಿ(ಗೋವಾ):ವರ್ಚುಯಲ್ ಅಸಿಸ್ಟೆಂಟ್ ಟೆಕ್ನಾಲಜಿ ಅಮೆಜಾನ್ ಅಲೆಕ್ಸಾ ಮೂಲಕ ಜೋರು ಸಂಗೀತ ಹಾಕಿ ಕಿರಿಕಿರಿ ಉಂಟು ಮಾಡಿದ್ದಲ್ಲದೇ, ಶಬ್ದಮಾಲಿನ್ಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಹೋಟೆಲ್ ಉದ್ಯಮಿಯೊಬ್ಬ ನೀಡಿದ ದೂರನ್ನು ಗೋವಾ ಹೈಕೋರ್ಟ್ ತಿರಸ್ಕರಿಸಿದೆ. ಜೊತೆಗೆ ಹೆಚ್ಚಿನ ಧ್ವನಿಮಾಡಿದ ಕಾರಣಕ್ಕಾಗಿ ಅಲೆಕ್ಸಾವನ್ನು ನಿಂದಿಸಲಾಗದು ಎಂದು ಹೇಳಿ ಹೋಟೆಲ್ ಉದ್ಯಮಿಗೆ 10 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಅಲೆಕ್ಸಾ ಮೂಲಕ ಸಂಗೀತ ಕೇಳಿದ್ದಕ್ಕೆ ಹೋಟೆಲ್ ಉದ್ಯಮಿಯೊಬ್ಬ ವ್ಯಕ್ತಿಯೊಬ್ಬರ ಮೇಲೆ ದೂರು ನೀಡಿ ಸಂಬಂಧಿತ ಪ್ರಾಧಿಕಾರದಿಂದ ಶೋಕಾಸ್ ನೋಟಿಸ್ ಜಾರಿ ಮಾಡಿಸಿದ್ದ. ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ತನ್ನಿಂದ ಯಾವುದೇ ಪ್ರಮಾದವಾಗಿಲ್ಲ. ತಪ್ಪಾಗಿ ನೋಟಿಸ್ ನೀಡಲಾಗಿದೆ. ಇದನ್ನು ಇತ್ಯರ್ಥ ಮಾಡಬೇಕು ಎಂದು ಅರ್ಜಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ಕೋರ್ಟ್ ನೋಟಿಸ್ ಅನ್ನು ರದ್ದು ಮಾಡಿ, ಹೋಟೆಲ್ ಉದ್ಯಮಿಗೇ ದಂಡ ವಿಧಿಸಿದೆ.
ನ್ಯಾಯಮೂರ್ತಿಗಳಾದ ಎಂ ಎಸ್ ಸೋನಕ್ ಮತ್ತು ಆರ್ ಎನ್ ಲಡ್ಡಾ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿ, ಅಲೆಕ್ಸಾ ವರ್ಚುಯಲ್ ಅಸಿಸ್ಟೆಂಟ್ ಟೆಕ್ನಾಲಜಿಯಾಗಿದೆ. ಅದನ್ನು ಬಳಸಿ ಸಂಗೀತ ಆಲಿಸುವುದು ಸಹಜ. ಅದನ್ನು ಕೇಳುವವರ ಮೇಲೆ ಮತ್ತು ಅದಕ್ಕೂ ಹೆಚ್ಚಾಗಿ ಅಲೆಕ್ಸಾ ಮೇಲೆ ದೂರಲಾಗದು ಎಂದಿದೆ.