ನವದೆಹಲಿ:ಗ್ರಾಮೀಣ ಬಡಜನರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಆರ್ಥಿಕ ನೆರವು ನೀಡುವ ಯೋಜನೆಯಾದ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಇನ್ನೂ 3 ವರ್ಷಗಳವರೆಗೆ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಈ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಮಾರ್ಚ್ 2024 ರವರೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಬಡ ಜನರಿಗೆ 'ಸೂರು ಖಾತ್ರಿ' ಪಡೆದುಕೊಳ್ಳಲು ಯೋಜನೆ ನೆರವಾಗಲಿದೆ ಎಂದು ಅವರು ತಿಳಿಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆ(ಪಿಎಂಎವೈ) ಗ್ರಾಮೀಣ ಪ್ರದೇಶದ ಬಡಜನರು ಸೂರು ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡುತ್ತಿದ್ದು, ಯೋಜನೆಯ ವಿಸ್ತರಣೆ ಬಳಿಕ ಬಾಕಿ ಉಳಿದಿರುವ 155.75 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಈ ಮೂಲಕ ದೇಶದಲ್ಲಿ 2.95 ಕೋಟಿ ಜನರಿಗೆ ಮನೆಗಳ ನಿರ್ಮಾಣ ಮಾಡಿದ ಗುರಿ ತಲುಪಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಯುಪಿ ಎಲೆಕ್ಷನ್ ತಯಾರಿ.. ಕಾಂಗ್ರೆಸ್ನಿಂದ ಮಹಿಳೆಯರಿಗಾಗಿ 'ಶಕ್ತಿ ವಿಧಾನ್' ಪ್ರಣಾಳಿಕೆ ಬಿಡುಗಡೆ
ಉಳಿದ ನಿರ್ಮಾಣದ ಒಟ್ಟು ಖರ್ಚು 1,98,581 ಕೋಟಿ ರೂಪಾಯಿಗಳಷ್ಟಿರಲಿದೆ ಎಂದು ಸರ್ಕಾರದ ವಕ್ತಾರರು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.