ಕರ್ನಾಟಕ

karnataka

ETV Bharat / bharat

ಜವರಾಯನ ಅಟ್ಟಹಾಸ..ಮಹಾರಾಷ್ಟ್ರದಲ್ಲಿ ಬಸ್​ ಕಂದಕಕ್ಕೆ ಬಿದ್ದು 12 ಮಂದಿ ದುರ್ಮರಣ

ಮಹಾರಾಷ್ಟ್ರದ ರಾಯಗಢದಲ್ಲಿ ಇಂದು ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಬಸ್​​ ಹಳ್ಳಕ್ಕೆ ಬಿದ್ದು 12 ಮಂದಿ ಸಾವನ್ನಪ್ಪಿದ್ದಾರೆ. ಮೃತ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ ​ ಕಂದಕಕ್ಕೆ ಬಿದ್ದ ಬಸ್
ಮಹಾರಾಷ್ಟ್ರದಲ್ಲಿ ​ ಕಂದಕಕ್ಕೆ ಬಿದ್ದ ಬಸ್

By

Published : Apr 15, 2023, 7:59 AM IST

Updated : Apr 15, 2023, 11:56 AM IST

ರಾಯಗಢ(ಮಹಾರಾಷ್ಟ್ರ):ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ಸೊಂದು ಕಂದಕಕ್ಕೆ ಬಿದ್ದು 12 ಜನರು ಸಾವನ್ನಪ್ಪಿದ ದುರ್ಘಟನೆ ರಾಯಗಢದ ಪುಣೆ- ಮುಂಬೈ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ 4 ಗಂಟೆಗೆ ನಡೆದಿದೆ. 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಇದೇ ವೇಳೆ ಸರ್ಕಾರ ಮೃತರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದೆ.

40 ಜನರಿದ್ದ ಖಾಸಗಿ ಬಸ್​ ಪುಣೆಯಿಂದ ಮುಂಬೈ ಕಡೆಗೆ ಹೋಗುತ್ತಿತ್ತು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪ್ರಯಾಣಿಕರು ನಿದ್ರೆಯಲ್ಲಿದ್ದಾಗ ಪುಣೆ ಮುಂಬೈ ಹೆದ್ದಾರಿಯ ಖೋಪೋಲಿಯಲ್ಲಿ ವೇಗವಾಗಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ಇದರಿಂದ ಬಸ್​ ನುಜ್ಜುಗುಜ್ಜಾಗಿದ್ದು, ಸ್ಥಳದಲ್ಲಿ 12 ಮಂದಿ ಅಸುನೀಗಿದ್ದಾರೆ. 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಬಂದ ರಕ್ಷಣಾ ಪಡೆ ಸಿಬ್ಬಂದಿ ಬಸ್​​​ನಲ್ಲಿದ್ದ ಜನರನ್ನು ರಕ್ಷಣೆ ಮಾಡಿದರು. ಬಸ್​ ಬಿದ್ದ ರಭಸದ ಆಧಾರದ ಮೇಲೆ ಅತಿಯಾದ ವೇಗವೇ ಇದಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಕಣಿವೆಯಲ್ಲಿ ಪರಿಹಾರ ಕಾರ್ಯಕ್ಕೆ ಅಡ್ಡಿ:ಬಸ್​ 40 ರಿಂದ 50 ಅಡಿ ಆಳ ಕಂದಕದಲ್ಲಿ ಉರುಳಿ ಬಿದ್ದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹಗ್ಗಗಳ ಸಹಾಯದಿಂದ ಸ್ಥಳೀಯರು, ರಕ್ಷಣಾ ಪಡೆಯ ಸಿಬ್ಬಂದಿ ಜನರ ರಕ್ಷಣೆಗೆ ಧಾವಿಸಿದರು. ಆಳದಿಂದ ಗಾಯಾಳುಗಳನ್ನು ಮೇಲೆತ್ತುವುದೇ ಸವಾಲಾಯಿತು ಎಂದು ಪೊಲೀಸರು ತಿಳಿಸಿದರು. ಭೀಕರ ಅಪಘಾತದ ಸ್ಥಳಕ್ಕೆ ಖಾಸಗಿ ಆಸ್ಪತ್ರೆಗಳ ವೈದ್ಯರನ್ನೂ ಚಿಕಿತ್ಸೆಗೆ ಕರೆಸಲಾಗಿದೆ. ಖಾಸಗಿ ಬಸ್‌ನಲ್ಲಿ ಗೋರೆಗಾಂವ್ (ಮುಂಬೈ) ವ್ಯಕ್ತಿಗಳಿದ್ದಾರೆ. ಪುಣೆಯಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಗೋರೆಗಾಂವ್‌ಗೆ ವಾಪಸ್​ ಆಗುತ್ತಿದ್ದಾಗ ಅವಘಡ ಸಂಭವಿಸಿದೆ.

ಖೋಪೋಲಿ ತಾಲೂಕಿನಲ್ಲಿ ಫೆಬ್ರವರಿಯಲ್ಲಿ ಇಂಥದ್ದೇ ಭೀಕರ ಅಪಘಾತ ಸಂಭವಿಸಿತ್ತು. ರಸ್ತೆಯ ತಿರುವಿನಲ್ಲಿ ಟ್ರಕ್ ಮತ್ತು ಇನ್ನೊಂದು ವಾಹನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಸರಣಿ ಅಪಘಾತಗಳು:ರಾಜ್ಯದಲ್ಲಿ ಶುಕ್ರವಾರ ಹಲವೆಡೆ ಸರಣಿ ಅಪಘಾತಗಳು ಸಂಭವಿಸಿವೆ. ವಿರಾರ್‌ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಟ್ರಕ್ ರಸ್ತೆಗೆ ಪಲ್ಟಿಯಾಗಿ ಅದರಡಿ ಸಿಲುಕಿ ಮೂವರು ಸಾವನ್ನಪ್ಪಿದ್ದರು. ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬರುತ್ತಿದ್ದ ಬೈಕ್ ಸವಾರರನ್ನು ತಪ್ಪಿಸುವ ಭರದಲ್ಲಿ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಟ್ರಕ್ ಅಡಿಯಲ್ಲಿ ಮೂವರು ಸ್ಥಳದಲ್ಲೇ ಶವವಾಗಿದ್ದರು.

ಇನ್ನೊಂದೆಡೆ ಗುಜರಾತ್​ನ ಸೂರತ್‌ನಿಂದ ಮಧ್ಯಪ್ರದೇಶಕ್ಕೆ ಬರುತ್ತಿದ್ದ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಬಸ್​ ಪಲ್ಟಿಯಾದ ಕಾರಣ 15 ಪ್ರಯಾಣಿಕರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಶಹದಾ ನಗರದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಮುಂಜಾನೆ 3 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದದೆ.ಅಪಘಾತದ ನಂತರ, ಪೊಲೀಸ್ ಪಡೆ ಸಹಾಯಕ್ಕೆ ಧಾವಿಸಿ ಪರಿಹಾರ ಕಾರ್ಯವನ್ನು ನಡೆಸಿತ್ತು.

ಓದಿ:ಕರಾಳ ಶುಕ್ರವಾರ.. ತುಮಕೂರಿನಲ್ಲಿ ಐವರು ಸೇರಿ ರಾಜ್ಯದಲ್ಲಿ 15 ಜನ ಸಾವು!

Last Updated : Apr 15, 2023, 11:56 AM IST

ABOUT THE AUTHOR

...view details