ನೋಯ್ಡಾ: ಬ್ರಾಹ್ಮಣ ಎಂಬುದು ಜಾತಿಯಲ್ಲ, ಅದು ಉನ್ನತ ಜೀವನ ವಿಧಾನವಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ದಿನೇಶ್ ಶರ್ಮಾ ಹೇಳಿದ್ದಾರೆ.
ಗೌತಮ್ ಬುದ್ಧ ನಗರದಲ್ಲಿ ಜೇವರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಧೀರೇಂದ್ರ ಸಿಂಗ್ ಪರ ಪ್ರಚಾರದ ವೇಳೆ ಅವರು ಮಾತನಾಡಿದರು. ವಿಧಾನಸಭಾ ಚುನಾವಣೆಯ ಹಿನ್ನೆಲೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಮತ್ತು ಬ್ರಾಹ್ಮಣವಾದದ ಬಗ್ಗೆ ಮತ್ತು ಜಾತಿವಾದದ ಬಗ್ಗೆ ಪಕ್ಷದ ನಿಲುವಿನ ಬಗ್ಗೆ ಆಗಾಗ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಯಾರೋ ಓರ್ವರು ಬ್ರಾಹ್ಮಣರ ಬಗ್ಗೆ ನನ್ನ ಆಲೋಚನೆಗಳನ್ನು ಕೇಳಿದರು, ಅದಕ್ಕೆ ಉತ್ತರಿಸಿ, ಬಿಜೆಪಿಗೆ 'ಸಬ್ಕಾ ಸಾಥ್, ಸಬ್ಕಾ ವಿಕಾಸ' ಬೇಕು ಅಷ್ಟೇ... ಬ್ರಾಹ್ಮಣ ಅಥವಾ ಗುಜ್ಜರ್, ಜಾಟ್‌ಗಳು ಅಲ್ಲ. ಪ್ರತಿಯೊಂದು ಜಾತಿಗೂ ಅದರ ಮಹತ್ವವಿದೆ ಮತ್ತು ಅದಕ್ಕಾಗಿಯೇ ನಾವು ಇಲ್ಲಿ ಎಲ್ಲಾ ಜಾತಿಗಳನ್ನು ಬೆಂಬಲಿಸುತ್ತೇವೆ ಎಂದು ಹೇಳಿದೆ ಎಂದು ತಿಳಿಸಿದರು.
ನನ್ನನ್ನು ಬ್ರಾಹ್ಮಣತ್ವಕ್ಕೆ ಜೋಡಿಸಿದರೆ ಅದಕ್ಕೆ ನಾನು ಹೌದು ಎನ್ನುತ್ತೇನೆ. ನಾನು ಬ್ರಾಹ್ಮಣ ಮತ್ತು ಆ ಬಗ್ಗೆ ಹೆಮ್ಮೆಪಡುತ್ತೇನೆ. ನಾನು ಅದನ್ನು ಯಾವುದೇ ಅಗೌರವದಿಂದ ನೋಡುವುದಿಲ್ಲ. ಬ್ರಾಹ್ಮಣರ ಕೆಲಸವು 'ಸರ್ವೇ ಭವಂತು ಸುಖಿನಾ', ಇತರರ ಸಂತೋಷದಲ್ಲಿ ಸಂತೋಷವನ್ನು ಅನುಭವಿಸುವವನು ಬ್ರಾಹ್ಮಣ ಎಂದು ಸ್ಪಷ್ಟನೆ ನೀಡಿದರು.