ಕಾಸರಗೋಡು (ಕೇರಳ):ಸಾಮಾಜಿಕ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಅಗ್ರಸ್ಥಾನದಲ್ಲಿರುವ ಕೇರಳದಲ್ಲಿ ಅರಣ್ಯ ವಾಸಿಗಳು ಇಂದಿಗೂ ಸೂಕ್ತವಾದ ರಸ್ತೆ ಸಂಪರ್ಕವಿಲ್ಲದೇ ಪರದಾಡುತ್ತಿದ್ದಾರೆ. ಮೃತ ಇಂಜಿನಿಯರ್ವೊಬ್ಬರ ಮೃತದೇಹವನ್ನು ಸ್ಟ್ರೆಚರ್‌ನಲ್ಲಿ ಸಾಗಿಸಿದ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿರುವುದು ಇದಕ್ಕೆ ಸಾಕ್ಷಿಯಂತಿದೆ.
ರಾಜ್ಯ ಇಂಧನ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿದ್ದ ಪಿ.ಎ. ಗೋಪಾಲನ್ ಎಂಬುವವರು ಯಕೃತ್ತಿನ ಕಾಯಿಲೆಯಿಂದ ಭಾನುವಾರ ರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ರಾತ್ರಿಯೇ ಸ್ವಗ್ರಾಮಕ್ಕೆ ಮೃತದೇಹ ತೆಗೆದುಕೊಂಡು ಹೋಗಬೇಕಾಗಿತ್ತು. ಆದರೆ, ಗ್ರಾಮಕ್ಕೆ ರಸ್ತೆ ಸಂಪರ್ಕವೇ ಇಲ್ಲದ ಕಾರಣ ಕುಟುಂಬಸ್ಥರು ಸೋಮವಾರದವರೆಗೆ ಸಾಗಿಸಲು ಕಾಯಬೇಕಾಯಿತು. ಯಾವುದೇ ವಾಹನಗಳು ಹೋಗದಂತಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಬಂಧಿಕರು ಮತ್ತು ಸ್ಥಳೀಯರು ಸ್ಟ್ರೆಚರ್ನಲ್ಲೇ ಮೃತದೇಹವನ್ನು ಸಾಗಿಸಬೇಕಾಯಿತು.
ರಸ್ತೆ ಸಂಪರ್ಕವೇ ಇಲ್ಲದ ಗ್ರಾಮ: ಸ್ಟ್ರೆಚರ್ನಲ್ಲೇ ಮೃತದೇಹ ಹೊತ್ತು ಸಾಗಿಸಿದ ಸಂಬಂಧಿಕರು ಕುಗ್ರಾಮವಾದ ಪುಲಿಮ್ಕೊಚ್ಚಿಯಿಂದ ಕಡಿದಾದ ಪ್ರದೇಶ ಮತ್ತು ಸಣ್ಣ ಮರದ ಸೇತುವೆಯ ಮೂಲಕವೇ ಗೋಪಾಲನ್ ಮೃತದೇಹವನ್ನು ಮನೆಯವರೆಗೆ ತೆಗೆದುಕೊಂಡು ಹೋಗಲಾಗಿದೆ. ರಸ್ತೆ ಸಂಪರ್ಕ ಇಲ್ಲದ ಈ ಪ್ರದೇಶದಲ್ಲಿ ಸುಮಾರು 30 ಪರಿಶಿಷ್ಟ ಪಂಗಡದ ಕುಟುಂಬಗಳು ವಾಸಿಸುತ್ತಿವೆ. ರಭಸದಿಂದ ಹರಿಯುವ ಜಲಪಾತವನ್ನು ದಾಟಲು ಚಿಕ್ಕ ಮರದ ಸೇತುವೆ ಇದೆ. ಭಾರಿ ಮಳೆಯಾದಾಗ ಸಂಪರ್ಕ ಕಡಿತಗೊಳ್ಳುತ್ತವೆ. ಅಲ್ಲದೇ, ಮಳೆ ಬಂದಾಗ ಈ ಭಾಗದ ವಿದ್ಯಾರ್ಥಿಗಳು ಶಾಲೆಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.
ಅರಣ್ಯ ಪ್ರದೇಶದ ಗ್ರಾಮಗಳಿಗೆ ಸೂಕ್ತ ಸಂಪರ್ಕಕ್ಕಾಗಿ ಸೇತುವೆ ನಿರ್ಮಿಸಬೇಕೆಂದು ಅನೇಕ ದಿನಗಳ ಬೇಡಿಕೆಯಾಗಿದೆ. ಈ ಸಂಬಂಧ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇವೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನೂ ಆಸ್ಪತ್ರೆಗೆ ಸಾಗಿಸುವ ಕಿಲೋ ಮೀಟರ್‌ಗಟ್ಟಲೇ ನಡೆಯಬೇಕಾದ ಅನಿರ್ವಾಯತೆ ಇದೆ ಎಂದು ಸ್ಥಳೀಯ ನಿವಾಸಿ ಸನಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಕೊಯಮತ್ತೂರು ರೈಲ್ವೆ ನಿಲ್ದಾಣದಲ್ಲಿ ಆತ್ಮಹತ್ಯೆ ಯತ್ನ: ಕಾಲು ಕಳೆದುಕೊಂಡ 60ರ ವೃದ್ಧ