ಇಂಪಾಲ್(ಮಣಿಪುರ):ಮಣಿಪುರದ ಇಂಪಾಲ್ ಪ್ರದೇಶದ ಉಚ್ಚಾಟಿತ ಬಿಜೆಪಿ ನಾಯಕ ಚೋಂಗ್ಥಮ್ ಬಿಜೋಯ್ ಅವರ ನಿವಾಸದ ಎದುರು ಸ್ಫೋಟ ಸಂಭವಿಸಿದೆ. ಚೋಂಗ್ಥಮ್ ಬಿಜೋಯ್ ನಿವಾಸದ ಮೇಲೆ ದುಷ್ಕರ್ಮಿಗಳು ಕಚ್ಚಾ ಬಾಂಬ್ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು ಅಂದರೆ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಬಾಂಬ್ ಎಸೆದಿದ್ದು, ಸ್ಫೋಟದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.
ಅಶಿಸ್ತಿನ ಆಧಾರದ ಮೇಲೆ ಕಳೆದ ತಿಂಗಳು ಬಿಜೆಪಿಯಿಂದ ಚೋಂಗ್ಥಮ್ ಬಿಜೋಯ್ ಅವರನ್ನು ಉಚ್ಛಾಟನೆ ಮಾಡಲಾಗಿತ್ತು. ದಾಳಿಯು ನನ್ನನ್ನು ರಾಜಕೀಯವಾಗಿ ಮೌನವಾಗಿಸುವ ಬೆದರಿಕೆಯಾಗಿರಬಹುದು ಎಂದು ಚೋಂಗ್ಥಮ್ ಬಿಜೋಯ್ ತಿಳಿಸಿದ್ದಾರೆ. ಈ ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮಣಿಪುರದಲ್ಲಿ ಇಂದು 2ನೇ ಹಂತದ ಮತದಾನ ಆರಂಭ; 22 ಕ್ಷೇತ್ರಗಳಲ್ಲಿ 92 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಮಣಿಪುರದಲ್ಲಿಂದು 2ನೇ ಹಾಗೂ ಕೊನೆಯ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. 6 ಜಿಲ್ಲೆಗಳ 22 ಕ್ಷೇತ್ರಗಳಲ್ಲಿ 92 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಸಂಜೆ 4ರವರೆಗೆ ಮತದಾನ ನಡೆಯಲಿದೆ. ಚುನಾವಣೆಯ ಹಿಂದಿನ ದಿನವೇ ಈ ದುರ್ಘಟನೆ ನಡೆದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮಣಿಪುರದಲ್ಲಿ ಮೊದಲ ಹಂತದ ಚುನಾವಣೆ ಫೆಬ್ರವರಿ 28 ರಂದು ನಡೆದಿದ್ದು, ಆ ವೇಳೆಯೂ ಕೆಲವೆಡೆ ಹಿಂಸಾಚಾರಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಅಪರಾಧ ಪ್ರಕರಣ ನಡೆದಿದೆ.
ಮತದಾನ ಮುಂದುವರೆದಿದ್ದು, ಬೆಳಗ್ಗೆ 9 ಗಂಟೆಯವರೆಗೆ ಶೇ.11.40ರಷ್ಟು ಮತದಾನವಾಗಿದೆ. ಮತದಾನ ಪ್ರಾರಂಭವಾಗುವ ಮೊದಲೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಯತ್ತ ಬಂದು ಸೇರಿದ್ದರು. 22 ಕ್ಷೇತ್ರಗಳಲ್ಲಿಯೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಮತದಾನ ಸುಗಮವಾಗಿ ನಡೆಯುತ್ತಿದೆ. ವಿರಾಮವಿಲ್ಲದೇ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಸೋಮವಾರದಂದು ನಡೆದ ಮೊದಲನೇ ಹಂತದ ಚುನಾವಣೆಯಲ್ಲಿ 38 ಕ್ಷೇತ್ರಗಳಲ್ಲಿ ಶೇ. 78ರಷ್ಟು ಮತದಾನವಾಗಿತ್ತು.