ಹೈದರಾಬಾದ್ (ತೆಲಂಗಾಣ):ನಮ್ಮ ದೇಶದಲ್ಲಿ ಬಿಜೆಪಿ ಆಳ್ವಿಕೆ ನಡೆಸುತ್ತಿರುವ ರಾಜ್ಯಗಳು ಲವ್ ಜಿಹಾದ್ ಕುರಿತ ಕಾನೂನುಗಳನ್ನು ತರುವ ಮೂಲಕ ಸಂವಿಧಾನವನ್ನು ಅಪಹಾಸ್ಯ ಮಾಡುತ್ತಿವೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ.
ಮಧ್ಯಪ್ರದೇಶದ ಸರ್ಕಾರ ಲವ್ ಜಿಹಾದ್ ವಿರುದ್ಧದ ಕಾನೂನನ್ನು ಜಾರಿಗೆ ತಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸಂವಿಧಾನದಲ್ಲಿ ಎಲ್ಲಿಯೂ ಲವ್ ಜಿಹಾದ್ ಬಗ್ಗೆ ಯಾವುದೇ ವ್ಯಾಖ್ಯಾನವಿಲ್ಲ. ಬಿಜೆಪಿ ಆಡಳಿತದ ರಾಜ್ಯಗಳು ಲವ್ ಜಿಹಾದ್ ನಿಷೇಧ ಕಾನೂನುಗಳನ್ನು ತರುವ ಮೂಲಕ ಸಂವಿಧಾನವನ್ನು ಅಪಹಾಸ್ಯ ಮಾಡುತ್ತಿವೆ.
ಒಂದು ವೇಳೆ ಬಿಜೆಪಿ ಕಾನೂನುಗಳನ್ನು ತರಲೇಬೇಕೆಂದು ಬಯಸಿದರೆ, ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸುವುದು ಹಾಗೂ ಜನರಿಗೆ ಉದ್ಯೋಗ ಸೃಸ್ಠಿಸುವ ಕಾನೂನುಗಳನ್ನು ಜಾರಿಗೆ ತರಲಿ ಎಂದಿದ್ದಾರೆ.
ಭಾರತ ಸಂವಿಧಾನದ 21, 14 ಮತ್ತು 25ನೇ ವಿಧಿ ಅನ್ವಯ ದೇಶದ ಯಾವುದೇ ನಾಗರಿಕರ ವೈಯಕ್ತಿಕ ಜೀವನದಲ್ಲಿ ಪ್ರವೇಶಿಸಲು ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ. ಇಂತಹ ಕಾನೂನುಗಳನ್ನು ಜಾರಿ ಮಾಡುವ ಮೂಲಕ ಸಂವಿಧಾನದ ಅಡಿಯಲ್ಲಿ ಜನತೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ. ಬಿಜೆಪಿ ಇಂಥ ಕೀಳು ಮಟ್ಟದ ರಾಜಕೀಯ ಮಾಡುವುದರಲ್ಲಿ ತೊಡಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಓವೈಸಿ ಕಿಡಿ ಕಾರಿದ್ದಾರೆ.