ನವದೆಹಲಿ:ಗೌತಮ್ ಅದಾನಿ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿ ಬೆಳೆಯುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲವಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಆಧಾರರಹಿತ, ಪರಿಶೀಲಿಸದೇ ದೋಷಾರೋಪ, ಮಾನನಷ್ಟ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದೆ. ಅಲ್ಲದೇ, ಕಲಾಪಗಳ ನಿಯಮಾನುಸಾರ ಅವರು ದಾಖಲೆ ನೀಡದೇ ಆರೋಪಿಸಿದ್ದಕ್ಕೆ ರಾಹುಲ್ ಹೇಳಿಕೆ ವಜಾಗೊಳಿಸಿ, ಹಕ್ಕುಚ್ಯುತಿ ನೋಟಿಸ್ ಜಾರಿ ಮಾಡಲಾಗಿದೆ.
ಲೋಕಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಆಧಾರರಹಿತ ದೋಷಾರೋಪಣೆ ಮತ್ತು ಮಾನನಷ್ಟ ಹೇಳಿಕೆ ನೀಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ವಿಶೇಷ ಹಕ್ಕು ನೋಟಿಸ್ ನೀಡಿದ್ದಾರೆ. ಸಂಸತ್ತಿನ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಸಂಸದ, ರಾಹುಲ್ ಗಾಂಧಿ ಅವರು ಪ್ರಧಾನಿ ವಿರುದ್ಧ ಮಾಡಿರುವ ಆರೋಪಗಳಿಗೆ ಸಾಕ್ಷ್ಯಗಳನ್ನು ನೀಡಬೇಕು. ಸಂಸದರಿಗೆ ಹಕ್ಕುಗಳಿದ್ದಂತೆ, ಕರ್ತವ್ಯಗಳಿರುತ್ತವೆ. ನಾವು ಟೀಕಿಸುವ ಸದನದಲ್ಲಿ ಇಲ್ಲದಿದ್ದರೆ ಅವರ ಹೆಸರನ್ನು ತೆಗೆದುಕೊಳ್ಳಬಾರದು ಎಂದು ಹೇಳಿದರು.
ಆರೋಪ ಸಾಬೀತು ಮಾಡಲು ಆಗ್ರಹ:ಈಗ ರಾಹುಲ್ ಗಾಂಧಿ ಎಲ್ಲಾ ಸಾಕ್ಷ್ಯಗಳನ್ನು ನೀಡಬೇಕು. ಇಲ್ಲದಿದ್ದರೆ ವಿಶೇಷಾಧಿಕಾರದ ನೋಟಿಸ್ ಅಡಿಯಲ್ಲಿ ಅವರು ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಮೋದಿ ಪ್ರಧಾನಿಯಾದ ನಂತರ ಅದಾನಿ ಅವರ ವಿಮಾನವನ್ನು ಬಳಸಲೇ ಇಲ್ಲ. ಯಾರಾದರೂ ಅದನ್ನು ಸಾಬೀತುಪಡಿಸಿದರೆ ನಾನು ನನ್ನ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಪ್ರಧಾನಿ ವಿರುದ್ಧ ಆರೋಪಿಸುತ್ತಿರುವ ಕುಟುಂಬವು ಯಾವ ಉದ್ಯಮಿಯಿಂದ, ಯಾವ ರೀತಿಯ ಪ್ರಯೋಜನಗಳನ್ನು ಪಡೆದುಕೊಂಡಿದೆ ಎಂಬುದು ನನಗೆ ತಿಳಿದಿದೆ ಎಂದು ಬಿಜೆಪಿ ಸಂಸದ ಹೇಳಿದರು.
ಬುಡಕಟ್ಟು ಸಮುದಾಯದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಮಾಡಿದ ಮೊದಲ ಭಾಷಣದ ಬಗ್ಗೆ ಚರ್ಚೆ ನಡೆಸದೆ, ಪ್ರಧಾನಿಗಳ ವಿರುದ್ಧ ವೈಯಕ್ತಿಕ ದಾಳಿ ನಡೆಸಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಕೆಲವೇ ಜನರಿಗೆ ಲೈಸೆನ್ಸ್ ಪರ್ಮಿಟ್ ಸಿಕ್ಕಿದೆ. ಅವರೆಲ್ಲರೂ ಶ್ರೀಮಂತರಾಗಿದ್ದಾರೆ ಎಂದು ಆರೋಪಿಸಿದರು.