ಕರ್ನಾಟಕ

karnataka

ದೆಹಲಿ ಪಾಲಿಕೆಯಲ್ಲಿ ಭಾರಿ ಕೋಲಾಹಲ: ಬಿಜೆಪಿ - ಆಪ್​ ಸದಸ್ಯರಿಂದ ರಣಾಂಗಣವೇ ಸೃಷ್ಟಿ

By

Published : Jan 6, 2023, 3:49 PM IST

ದೆಹಲಿ ಮಹಾನಗರ ಪಾಲಿಕೆಯ ಚೊಚ್ಚಲ ಸಭೆಯು ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಮಾಡದೇ ಮುಂದೂಡಿಕೆ ಆಗಿದೆ. ನಾಮನಿರ್ದೇಶಿತ ಕೌನ್ಸಿಲರ್‌ಗಳ ವಿಚಾರವಾಗಿ ಬಿಜೆಪಿ ಮತ್ತು ಆಪ್​ ಸದಸ್ಯರು ರಣಾಂಗಣವೇ ಸೃಷ್ಟಿ ಮಾಡಿದ್ದಾರೆ.

bjp-and-aap-councillors-clash-with-each-other-ahead-of-delhi-mayor-polls-at-civic-centre
ದೆಹಲಿ ಪಾಲಿಕೆಯಲ್ಲಿ ಭಾರಿ ಕೋಲಾಹಲ: ಬಿಜೆಪಿ - ಆಪ್​ ಸದಸ್ಯರಿಂದ ರಣಾಂಗಣವೇ ಸೃಷ್ಟಿ

ದೆಹಲಿ ಪಾಲಿಕೆಯಲ್ಲಿ ಭಾರಿ ಕೋಲಾಹಲ: ಬಿಜೆಪಿ - ಆಪ್​ ಸದಸ್ಯರಿಂದ ರಣಾಂಗಣವೇ ಸೃಷ್ಟಿ

ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿ ಮಹಾನಗರ ಪಾಲಿಕೆಯಲ್ಲಿ ಇಂದು ರಣಾಂಗಣ ಸೃಷ್ಟಿಯಾಗಿದೆ. ಮೇಯರ್​ ಆಯ್ಕೆ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷ ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರು ದೊಡ್ಡ ಮಟ್ಟದ ಗಲಾಟೆ ಮಾಡಿದ್ದಾರೆ. ಪಾಲಿಕೆ ಸಭಾಂಗಣದಲ್ಲಿ ಕೌನ್ಸಿಲರ್‌ಗಳ ನಡುವೆ ಪರಸ್ಪರ ವಾಗ್ವಾದ, ಘೋಷಣೆ ಕೂಗಿ ಗದ್ದಲದ ವಾತಾವರಣ ಉಂಟು ಮಾಡಲಾಗಿದೆ. ಅಲ್ಲದೇ, ನೂಕಾಟ, ತಳ್ಳಾಟ ಮಾಡಿ ಕುರ್ಚಿಯಿಂದ ದಾಳಿ ಮಾಡಲು ಯತ್ನಿಸುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.

ಇತ್ತೀಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ 15 ವರ್ಷಗಳಿಂದ ಆಡಳಿತದಲ್ಲಿದ್ದ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ದೆಹಲಿ ಆಡಳಿತಾರೂಢ ಆಪ್​ ಪಕ್ಷವು 134 ಸ್ಥಾನಗಳನ್ನು ಗೆದ್ದು ಪಾಲಿಕೆಯಲ್ಲೂ ಅಧಿಕಾರಕ್ಕೆ ಬಂದಿದೆ. ಬಿಜೆಪಿ 104 ಸ್ಥಾನಗಳೊಂದಿಗೆ ವಿರೋಧ ಪಕ್ಷದಲ್ಲಿ ಇದೆ. ಇಂದು ನೂತನ ಮೇಯರ್​ ಆಯ್ಕೆಗೆ ಚುನಾವಣೆ ಪ್ರತಿಕ್ರಿಯೆ ನಡೆಯುತ್ತಿತ್ತು. ಆದರೆ, ಲೆಫ್ಟಿನೆಂಟ್​ ಗವರ್ನರ್​ ಮಾಡಿರುವ ನಾಮನಿರ್ದೇಶಿತ ಕೌನ್ಸಿಲರ್‌ಗಳ ಕುರಿತು ಆಪ್​ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಘರ್ಷಣೆ ಉಂಟಾಗಿದ್ದರಿಂದ ಭಾರಿ ಕೋಲಾಹಲ ಸೃಷ್ಟಿಯಾಯಿತು.

ನಾಮನಿರ್ದೇಶಿತ ಕೌನ್ಸಿಲರ್‌ಗಳು ಪ್ರಮಾಣ ವಚನಕ್ಕೆ ಆಕ್ಷೇಪ: ಪಾಲಿಕೆ ಕಲಾಪ ಆರಂಭವಾಗುತ್ತಿದ್ದಂತೆ ನಾಮ ನಿರ್ದೇಶನಕೊಂಡ ಬಿಜೆಪಿ ಕೌನ್ಸಿಲರ್ ಸತ್ಯ ಶರ್ಮಾ ಸಭಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶರ್ಮಾ ಅವರಿಗೆ ದೆಹಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂತೋಷ್ ಕುಮಾರ್ ರೈ ಪ್ರಮಾಣ ವಚನ ಬೋಧಿಸಿದರು. ಉಳಿದ ಸದಸ್ಯರು ಸಹ ಪ್ರಮಾಣ ವಚನ ಸ್ವೀಕರಿಸಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದನದ ನಾಯಕರಾದ ಆಪ್​ನ ಮುಖೇಶ್ ಗೋಯಲ್, ಕಳೆದ 25 ವರ್ಷಗಳಲ್ಲಿ ಚುನಾಯಿತ ಸದಸ್ಯರಿಗಿಂತ ಮೊದಲೇ ನಾಮನಿರ್ದೇಶಿತ ಕೌನ್ಸಿಲರ್‌ಗಳು ಪ್ರಮಾಣ ವಚನ ಸ್ವೀಕರಿಸುವ ಘಟನೆ ಎಂದಿಗೂ ನಡೆದಿಲ್ಲ ಎಂದು ಹೇಳಿದರು.

ಸದಸ್ಯರ ನಡುವೆ ವಾಗ್ವಾದ: ಈ ವೇಳೆ ಬಿಜೆಪಿ ಮತ್ತು ಎಎಪಿ ಕೌನ್ಸಿಲರ್‌ಗಳು ಪರಸ್ಪರ ವಾಗ್ವಾದ ನಡೆಸಿ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಆಪ್​ ಕೌನ್ಸಿಲರ್‌ಗಳು ಪ್ರತಿಭಟನೆ ಆರಂಭಿಸಿ, ಹಲವರು ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಯತ್ತ ಧಾವಿಸಿದರು. ಇದರಿಂದ ಭಾರಿ ಗದ್ದಲ ಆರಂಭವಾಯಿತು. ಅಲ್ಲದೇ, ಕೌನ್ಸಿಲರ್‌ಗಳು ಮೇಜುಗಳ ಮೇಲೆ ಏರಿ ವಿರೋಧ ಹೊರ ಹಾಕಿದರು. ಬಿಜೆಪಿ ಕೌನ್ಸಿಲರ್‌ಗಳು ಕೂಡ ಸುತ್ತಲೂ ಜಮಾಯಿಸಿ, ಆಪ್​ ಸದಸ್ಯರೊಂದಿಗೆ ವಾಗ್ವಾದಕ್ಕೆ ಇಳಿದರು.

ರಣಾಂಗಣವೇ ಸೃಷ್ಟಿ:ಎರಡು ಕಡೆಯ ಸದಸ್ಯರ ನಡುವೆ ನೂಕಾಟ, ತಳ್ಳಾಟ ಜೋರಾಗಿ ರಣಾಂಗಣವೇ ಸೃಷ್ಟಿ ಆಯಿತು. ಇದೇ ವೇಳೆ, ಕೆಲ ಸದಸ್ಯರು ಕುರ್ಚಿಯನ್ನು ಎತ್ತಿಕೊಂಡು ದಾಳಿ ಮಾಡಲು ಯತ್ನಿಸುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಸದನವನ್ನು ಒಂದು ಗಂಟೆ ಕಾಲ ಮುಂದೂಡಲಾಯಿತು. ಅಲ್ಲದೇ, ನಂತರ ಇಡೀ ಒಂದು ದಿನದ ಕಲಾಪವನ್ನೇ ಮುಂದೂಡುವ ಬಗ್ಗೆ ಘೋಷಣೆ ಮಾಡಲಾಯಿತು. ಈ ಮೂಲಕ ಪಾಲಿಕೆಯ ಚೊಚ್ಚಲ ಸಭೆಯು ಮೇಯರ್ ಮತ್ತು ಉಪಮೇಯರ್ ಆಯ್ಕೆ ಮಾಡದೇ ಮುಂದೂಡಿಕೆ ಆಗಿದೆ.

ಅಭ್ಯರ್ಥಿ ಅಭ್ಯರ್ಥಿಗಳು:ಆಮ್ ಆದ್ಮಿ ಪಕ್ಷವು ದೆಹಲಿ ವಿಶ್ವವಿದ್ಯಾಲಯದ ಮಾಜಿ ಶಿಕ್ಷಕಿ ಶೆಲ್ಲಿ ಒಬೆರಾಯ್ ಅವರನ್ನು ಮೇಯರ್ ಅಭ್ಯರ್ಥಿಯಾಗಿ ಮತ್ತು ಆಲೆ ಮೊಹಮ್ಮದ್ ಇಕ್ಬಾಲ್ ಅವರನ್ನು ಉಪಮೇಯರ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇತ್ತ, ಬಿಜೆಪಿ ಮೇಯರ್ ಸ್ಥಾನಕ್ಕೆ ರೇಖಾ ಗುಪ್ತಾ ಮತ್ತು ಉಪ ಮೇಯರ್​ ಸ್ಥಾನಕ್ಕೆ ಕಮಲ್ ಬಗ್ರಿ ಅವರನ್ನು ನಾಮನಿರ್ದೇಶನ ಮಾಡಿದೆ.

ಇದನ್ನೂ ಓದಿ:ದೆಹಲಿ ಪಾಲಿಕೆ ಗದ್ದುಗೆ ಏರಿದ ಆಮ್​ ಆದ್ಮಿ..​15 ವರ್ಷಗಳ ಬಿಜೆಪಿ ಆಡಳಿತಕ್ಕೆ ಇತಿಶ್ರೀ

For All Latest Updates

ABOUT THE AUTHOR

...view details