ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣಾ ಅಖಾಡ ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿದೆ. ಅಧಿಕಾರವನ್ನು ಉಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಟಿಎಂಸಿ ಹೋರಾಡುತ್ತಿದ್ದರೆ, ಬಿಜೆಪಿ ಶತಾಯಗತಾಯ ರಾಜ್ಯದಲ್ಲಿ ಕಮಲ ಅರಳಿಸಬೇಕೆಂದು ಪಣತೊಟ್ಟಿದೆ.
ಈ ಹೊತ್ತಲ್ಲಿ, ಇಂದು ಮುಂಜಾನೆ ಕಡಪರದಲ್ಲಿರುವ ಗೋದಾಮಿನೊಳಗೆ ಟಿಎಂಸಿ ಕಾರ್ಯಕರ್ತರು ನುಗ್ಗಿ, ಪ್ರಚಾರದ ವ್ಯಾನ್ಗಳು, ಬ್ಯಾನರ್ಗಳನ್ನೆಲ್ಲ ಧ್ವಂಸ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಚುನಾವಣೆ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ, ಚುನಾವಣೆ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಟಿಎಂಸಿ ಗೂಂಡಾಗಳು ನಮ್ಮ ಗೋಡೌನ್ ಪ್ರವೇಶಿಸಿ, ಕಾರುಗಳಿಗೆ ಹಾನಿಗೊಳಿಸಿದ್ದಾರೆ. ಕೆಲ ವಾಹನಗಳನ್ನು ಕದ್ದೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ರಿಟ್ವೀಟ್ ಮಾಡಿರುವ ಬಿಜೆಪಿ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಲ್ವಿಯಾ, ಟಿಎಂಸಿಯ ಕಿಡಿಗೇಡಿಗಳು ನಮ್ಮ ಗೋದಾಮನ್ನು ಧ್ವಂಸಗೊಳಿಸಿದ್ದಾರೆ. ಅಲ್ಲಿದ್ದ ಬೆಲೆ ಬಾಳುವ ವಸ್ತುಗಳಿಗೆ ಹಾನಿ ಮಾಡಿದ್ದು, ಎಲ್ಇಡಿಗಳನ್ನು ತೆಗೆದುಕೊಂಡಿದ್ದಾರೆ. ಟಿಎಂಸಿಯ ರಾಜಕೀಯ ಹಿಂಸಾಚಾರವನ್ನ ನಿರ್ವಹಿಸಿ ಚುನಾವಣೆ ನಡೆಸೋದು ಚುನಾವಣಾ ಆಯೋಗಕ್ಕೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ತೃಣಮೂಲ ಕಾಂಗ್ರೆಸ್ನ ಈ ದುರ್ನಡತೆಗೆ ಜನತೆ ತಕ್ಕ ಉತ್ತರ ನೀಡುತ್ತಾರೆ ಎಂದೂ ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಒಟ್ಟು 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27 ರಂದು ಮೊದಲ ಹಂತದ ಎಲೆಕ್ಷನ್ ನಡೆಯಲಿದೆ, ಮೇ 2 ರಂದು ಫಲಿತಾಂಶ ಹೊರಬೀಳಲಿದೆ ಎಂದು ಶುಕ್ರವಾರವಷ್ಟೇ ಚುನಾವಣಾ ಆಯೋಗ ಘೋಷಿಸಿತ್ತು.