ಬಿಲಾಸ್ಪುರ:ಅಸ್ಸೋಂ ಮತ್ತು ಛತ್ತೀಸ್‌ಗಢದ ಕಾಡೆಮ್ಮೆಗಳ ವಿವಿಧ ವಂಶವಾಹಿ ಮಿಶ್ರಣಗೊಂಡು ವಿಕೃತ ತಳಿಗಳು ಹುಟ್ಟುತ್ತವೆ ಮತ್ತು ಛತ್ತೀಸ್‌ಗಢದ ಕಾಡೆಮ್ಮೆಗಳ ಜೀನ್ ಪೂಲ್ ಕಲುಷಿತವಾಗುವ ಮೂಲಕ ಅಪಾಯ ಹೆಚ್ಚಾಗುತ್ತದೆ ಎಂದು ಛತ್ತೀಸ್‌ಗಢದ ನ್ಯಾಯಾಲಯ ಅಸ್ಸೋಂನಿಂದ ಹೆಣ್ಣು ಕಾಡೆಮ್ಮೆಯನ್ನು ತರುವುದನ್ನು ತಡೆಹಿಡೆದಿದೆ. ಛತ್ತೀಸ್‌ಗಢ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಗೌತಮ್ ಭಾದುರಿ ಮತ್ತು ನ್ಯಾಯಮೂರ್ತಿ ನರೇಶ್ ಕುಮಾರ್ ಚಂದ್ರವಂಶಿ ಅವರಿದ್ದ ಪೀಠವು ಬುಧವಾರ ಈ ಆದೇಶವನ್ನು ಹೊರಡಿಸಿದೆ.
ಮೂರು ವರ್ಷಗಳ ಹಿಂದೆ ಏಪ್ರಿಲ್ 2020ರಲ್ಲಿ, ಛತ್ತೀಸ್‌ಗಢದ ಅರಣ್ಯ ಇಲಾಖೆಯು ಅಸ್ಸೋಂನ ಮಾನಸ ಹುಲಿ ಸಂರಕ್ಷಿತ ಪ್ರದೇಶದಿಂದ ಒಂದು ಗಂಡು ಮತ್ತು ಹೆಣ್ಣು ಕಾಡೆಮ್ಮೆಯನ್ನು ಸೆರೆಹಿಡಿದು ಬರ್ನವಾಪರ ಅಭಯಾರಣ್ಯದ 25 ಎಕರೆ ವಿಶಾಲ ಪ್ರದೇಶದಲ್ಲಿ ಜೀವನ ಪರ್ಯಂತ ಇಟ್ಟುಕೊಳ್ಳಬೇಕು ಎಂದು ಅರಣ್ಯ ಇಲಾಖೆ ತೀರ್ಮಾನಿಸಿತ್ತು. ಇದನ್ನು ವಿರೋಧಿಸಿ ರಾಯ್‌ಪುರದ ಸಾಮಾಜಿಕ ಕಾರ್ಯಕರ್ತ ನಿತಿನ್ ಸಿಂಘ್ವಿ ಅವರು 2022ರ ಜನವರಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.
ಸಾರ್ವಜನಿಕ ಹಿತಾಸಕ್ತಿ ಬಾಕಿ ಇರುವಾಗಲೇ, ಛತ್ತೀಸ್‌ಗಢ ಅರಣ್ಯ ಇಲಾಖೆಯು 2023ರ ಮಾರ್ಚ್‌ನಲ್ಲಿ ಹೋಳಿ ಹಬ್ಬಕ್ಕೆ ಮುನ್ನ ಇನ್ನೂ ನಾಲ್ಕು ಹೆಣ್ಣು ಕಾಡೆಮ್ಮೆಗಳನ್ನು ತರಲು ತಂಡವನ್ನು ಅಸ್ಸೋಂಗೆ ಕಳುಹಿಸಿದ್ದು. ಬುಧವಾರದಂದು ಇದನ್ನು ಪ್ರಶ್ನಿಸಿ ನಿತಿನ್ ಸಿಂಘ್ವಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ವಾಸ್ತವವಾಗಿ, ಛತ್ತೀಸ್‌ಗಢದ ಕಾಡೆಮ್ಮೆಗಳ ಜೀನ್ ಪೂಲ್ ಪ್ರಪಂಚದಲ್ಲಿಯೇ ಶುದ್ಧವಾಗಿದ್ದು, ಅಸ್ಸೋಂನ ಅರಣ್ಯ ಎಮ್ಮೆಗಳು ಮತ್ತು ಛತ್ತೀಸ್‌ಗಢದ ಅರಣ್ಯ ಎಮ್ಮೆಗಳನ್ನು ಮಿಶ್ರಣ ಮಾಡುವ ಮೂಲಕ, ಹೊಸ ಜೀನ್ ಪೂಲ್ ಅನ್ನು ಸಿದ್ಧಪಡಿಸಲು ಯೋಜಿಸಿತ್ತು. ನಂತರ ಭಾರತ ಸರ್ಕಾರದ ಉನ್ನತ ಸಂಸ್ಥೆಯಾದ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಛತ್ತೀಸ್‌ಗಢ ಮತ್ತು ಅಸ್ಸೋಂನ ಕಾಡೆಮ್ಮೆಗಳ ವಂಶವಾಹಿಗಳನ್ನು ಮಿಶ್ರಣ ಮಾಡುವುದರಿಂದ ಛತ್ತೀಸ್‌ಗಢದ ಅರಣ್ಯ ಎಮ್ಮೆಗಳ ಜೀನ್ ಪೂಲ್‌ನ ಗುಣಲಕ್ಷಣಗಳನ್ನು ನಿರ್ವಹಿಸಲಾಗುವುದಿಲ್ಲ ಎಂದು ಎರಡು ಬಾರಿ ಆಕ್ಷೇಪಣೆ ಸಲ್ಲಿಸಿತ್ತು.