ಪಾಟ್ನಾ: ಮಹಾರಾಷ್ಟ್ರದ ನಂತರ ಇದೀಗ ಬಿಹಾರ ರಾಜಕೀಯದಲ್ಲಿಯೂ ಬಿರುಕು ಕಾಣಿಸಿಕೊಂಡಿದೆ. ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ಹಾಗೂ ಜೆಡಿಯು ಮೈತ್ರಿ ಸರ್ಕಾರದಲ್ಲಿ ಬದಲಾವಣೆಯ ಸುಳಿವು ಗೋಚರಿಸುತ್ತಿದೆ. ಇದಕ್ಕೆ ಪುಷ್ಠಿ ನೀಡುವ ರೀತಿಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಶಾಸಕರು ಹಾಗೂ ಸಂಸದರ ಮಹತ್ವದ ಸಭೆ ಕರೆದಿದ್ದಾರೆ.
ಜನತಾ ದಳ ಹಾಗೂ ಕೇಂದ್ರ ಸಚಿವ ಸ್ಥಾನಕ್ಕೆ ಆರ್.ಸಿ.ಪಿ ಸಿಂಗ್ ರಾಜೀನಾಮೆ ನೀಡಿದ ನಂತರ ಮಹತ್ವದ ಬೆಳವಣಿಗೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಿಜೆಪಿ-ಜೆಡಿ(ಯು) ಮಧ್ಯೆ ಶೀತಲ ಸಮರ ನಡೆಯುತ್ತಿದ್ದು, ಜೆಡಿಯು ಮೈತ್ರಿ ಮುರಿದುಕೊಳ್ಳಲು ಮುಂದಾಗಿದೆ ಎನ್ನಲಾಗ್ತಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ನೀತಿ ಆಯೋಗದ ಸಭೆಗೆ ನಿತೀಶ್ ಕುಮಾರ್ ಗೈರಾಗಿದ್ದರು. ಈ ಮೂಲಕ ಮುಸುಕಿನ ಗುದ್ದಾಟಕ್ಕೆ ವೇಗ ಸಿಕ್ಕಿತ್ತು. ಕಳೆದ ಭಾನುವಾರ ರಾತ್ರಿ ನಿತೀಶ್ ಕುಮಾರ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನಲಾಗ್ತಿದೆ.
ಬಿಹಾರ ರಾಜಕೀಯ ಪಕ್ಷಗಳ ಬಲಾಬಲ ಹೀಗಿದೆ..
- ಬಿಜೆಪಿ ಶಾಸಕರು 44
- ಜೆಡಿಯು 45
- ಆರ್ಜೆಡಿ 79
- ಕಾಂಗ್ರೆಸ್ 19
- ಇತರೆ 21
ಮಹಾರಾಷ್ಟ್ರದ ಆಟ ಬಿಹಾರದಲ್ಲೂ?: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಸೇರಿಕೊಂಡು ಈ ಹಿಂದೆ ಸರ್ಕಾರ ರಚನೆ ಮಾಡಿದ್ದರು. ಆದರೆ, ಶಿವಸೇನೆಯ ವಿರುದ್ಧ ಬಂಡಾಯವೆದ್ದ ಏಕನಾಥ್ ಶಿಂದೆ ಬಿಜೆಪಿ ಜೊತೆಗೆ ಸರ್ಕಾರ ರಚನೆ ಮಾಡಿದ್ದಾರೆ. ಇದೀಗ ಬಿಹಾರದಲ್ಲೂ ಜೆಡಿಯು+ಬಿಜೆಪಿ ಪಕ್ಷಗಳು ಆಡಳಿತ ನಡೆಸುತ್ತಿದ್ದು, ನಿತೀಶ್ ಕುಮಾರ್ ಬಿಜೆಪಿ ಜೊತೆಗಿನ ಮೈತ್ರಿ ಕಳೆದುಕೊಂಡು ಜೆಡಿಯು, ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ.
ಬಿಕ್ಕಟ್ಟು ಉಂಟಾಗಿದ್ದೇಕೆ?:ಕೇಂದ್ರ ಸಚಿವ ಸಂಪುಟದಲ್ಲಿ ಜೆಡಿಯು ಪ್ರತಿನಿಧಿಸುತ್ತಿದ್ದ ಆರ್.ಪಿ.ಸಿ ಸಿಂಗ್ ರಾಜೀನಾಮೆ ನೀಡಿದ ನಂತರದಲ್ಲಿ ಬಿಕ್ಕಟ್ಟು ಉದ್ಭವವಾಗಿದೆ. ಕೇಂದ್ರ ಸಚಿವ ಸಂಪುಟಕ್ಕೆ ತಮ್ಮ ಪಕ್ಷದಿಂದ ಯಾರನ್ನೂ ಸೇರಿಸುವುದಿಲ್ಲ ಎಂದು ಜೆಡಿಯು ಘೋಷಿಸಿದೆ. ಇದರೊಂದಿಗೆ ಬಿಕ್ಕಟ್ಟು ಬಿಗಡಾಯಿಸಿದೆ. ಕೇಂದ್ರ ಸಂಪುಟದಲ್ಲಿ 2 ಸಚಿವ ಸ್ಥಾನಕ್ಕೆ ಜೆಡಿಯು ಬೇಡಿಕೆ ಇಟ್ಟಿತ್ತು. ಆದರೆ ಬಿಜೆಪಿ ಕೇವಲ 1 ಸ್ಥಾನ ನೀಡಿದೆ. ಆ 1 ಸ್ಥಾನದಿಂದ ಸಚಿವರಾಗಿ ಆಯ್ಕೆಯಾಗಿದ್ದ ಆರ್‌ಸಿಪಿ ಸಿಂಗ್ ಕಳೆದ ಕೆಲ ದಿನಗಳ ಹಿಂದೆ ಸಚಿವ ಸ್ಥಾನ ಮತ್ತು ಜೆಡಿಯುಗೂ ರಾಜೀನಾಮೆ ಸಲ್ಲಿಸಿದ್ದರು.
ಜೆಡಿಯು ಜೊತೆ ಮೈತ್ರಿಗೆ ಸಿದ್ಧ- ಆರ್ಜೆಡಿ:ನಿತೀಶ್ ಕುಮಾರ್ ಅವರು ಬಿಜೆಪಿ ಜೊತೆಗಿನ ಮೈತ್ರಿ ಕಳೆದುಕೊಂಡರೆ ಜೆಡಿಯು ಜೊತೆ ಮೈತ್ರಿ ಮಾಡಿಕೊಳ್ಳಲು ಆರ್ಜೆಡಿ ಸಿದ್ಧವಿದೆ ಎಂದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಿವಾನಂದ ತಿವಾರಿ ತಿಳಿಸಿದ್ದಾರೆ. ಇದೇ ವಿಚಾರವಾಗಿ ನಾಳೆ ಬೆಳಗ್ಗೆ 11 ಗಂಟೆಗೆ ಸಭೆ ನಡೆಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ:ನಾಳೆ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ; ಫಡ್ನವೀಸ್ಗೆ ಗೃಹ ಖಾತೆ?