ನವದೆಹಲಿ: ಇಸ್ರೇಲ್ ಮೂಲದ ವೈರಸ್ ಬಳಸಿಕೊಂಡು ಭಾರತದ ಇಬ್ಬರು ಕೇಂದ್ರ ಸಚಿವರು, ಮೂವರು ವಿರೋಧ ಪಕ್ಷದ ನಾಯಕರು ಮತ್ತು ನ್ಯಾಯಾಧೀಶರು ಮತ್ತು ಪತ್ರಕರ್ತರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿಯ ಮೊಬೈಲ್ ಫೋನ್ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಬಹಿರಂಗಪಡಿಸಿದೆ.
ಪೆಗಾಸಸ್ ಸ್ಪೈ ವೇರ್ ಬಳಸಿಕೊಂಡು ಅಪರಿಚಿತ ಏಜೆನ್ಸಿಯೊಂದು ಯಶಸ್ವಿಯಾಗಿ ಹ್ಯಾಕ್ ಮಾಡಿದೆ ಎಂದು 'ದಿ ವೈರ್' , 'ದಿ ವಾಷಿಂಗ್ಟನ್ ಪೋಸ್ಟ್', 'ದಿ ಗಾರ್ಡಿಯನ್' ಸೇರಿದಂತೆ 16 ಅಂತಾರಾಷ್ಟ್ರೀಯ ಮಾಧ್ಯಮಗಳು ನಡೆಸಿದ ಕಾರ್ಯಾಚರಣೆಯಲ್ಲಿ ತಿಳಿದು ಬಂದಿದೆ.
ಬಹಿರಂಗಗೊಂಡ ಫೋನ್ ಸಂಖ್ಯೆಗಳಲ್ಲಿ ಕೆಲವು ಫೋನ್ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಪೆಗಾಸಸ್ ಸ್ಪೈ ವೇರ್ ಅಳವಡಿಕೆಗೊಂಡಿರುವುದಾಗಿ ತಿಳಿದು ಬಂದಿದೆ.
ಡೇಟಾಬೇಸ್‌ನಲ್ಲಿರುವವರ ಸಂಖ್ಯೆಯಲ್ಲಿ 40 ಕ್ಕೂ ಹೆಚ್ಚು ಪತ್ರಕರ್ತರು, ಮೂರು ಪ್ರಮುಖ ಪ್ರತಿಪಕ್ಷಗಳ ನಾಯಕರು, ಒಬ್ಬ ಸಾಂವಿಧಾನಿಕ ಪ್ರಾಧಿಕಾರ ಹುದ್ದೆಯಲ್ಲಿರುವವರು, ಇಬ್ಬರು ಮಂತ್ರಿಗಳು, ಭದ್ರತಾ ಸಂಸ್ಥೆಗಳ ಪ್ರಸ್ತುತ ಮತ್ತು ಮಾಜಿ ಮುಖ್ಯಸ್ಥರು ಹಾಗೂ ಅಧಿಕಾರಿಗಳು, ಹಲವಾರು ಉದ್ಯಮಿಗಳು ಸೇರಿದ್ದಾರೆಂದು ತಿಳಿದು ಬಂದಿದೆ.
ಈ ಕುರಿತು ಎದ್ದಿರುವ ಪ್ರಶ್ನೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ.ರಾಜೇಂದ್ರ ಕುಮಾರ್ ಅವರು, ದೇಶದಲ್ಲಿ ಪ್ರತಿಬಂಧಕ್ಕಾಗಿ ಈಗಾಗಲೇ ಕಠಿಣ ಶಿಷ್ಟಾಚಾರ ನಿಯಮಾವಳಿ (ಪ್ರೋಟೋಕಾಲ್) ಜಾರಿಗೆ ತರಲಾಗಿದೆ.
ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸಂಸ್ಥೆಗಳು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಮಾತ್ರ ಕಣ್ಗಾವಲು ವ್ಯವಸ್ಥೆಯನ್ನು ಬಳಸುತ್ತವೆ. ದೇಶದಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎನ್ನುವ ಮೂಲಕ ಈ ವರದಿಯನ್ನು ಭಾರತ ಸರ್ಕಾರ ತಳ್ಳಿ ಹಾಕಿದೆ.
ಯಾರ ಫೋನ್ಗಳನ್ನು ಹ್ಯಾಕ್ ಮಾಡಲಾಗಿಲ್ಲ ಎಂದೂ ಸ್ಪಷ್ಟನೆ ನೀಡಿದೆ.