ನವದೆಹಲಿ/ನೋಯ್ಡಾ: ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ವಿಫಲವಾದ ನಂತರ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ತಮ್ಮ ಪಕ್ಷವು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭೀಮ್ ಆರ್ಮಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ 33 ಸ್ಥಾನಗಳ ಹೆಸರನ್ನು ಆಜಾದ್ ಘೋಷಿಸಿದ್ದಾರೆ.
ನಾವು ಬದಲಾವಣೆಗಾಗಿ ಹೋರಾಡುತ್ತಿದ್ದೇವೆ ಮತ್ತು ಪ್ರಾಮಾಣಿಕವಾಗಿ ಹೋರಾಡುತ್ತೇವೆ. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ನಾವು ಸಂಪೂರ್ಣ ಶಕ್ತಿಯನ್ನು ಬಳಸುತ್ತೇವೆ ಎಂದು ಆಜಾದ್ ಹೇಳಿದರು.
ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಬಗ್ಗೆ ಮಾತನಾಡಿದ ಅವರು, ಅವರು ಉಲ್ಟಾ ಹೊಡೆದಿದ್ದಾರೆ, ಮೋಸ ಮಾಡಿದ್ದಾರೆ, ಈಗ ಸಮಾಜವಾದಿ ಪಕ್ಷ 100 ಸೀಟು ಕೊಟ್ಟರೂ ನಾವು ಮತ್ತೇ ಅವರ ಬಳಿ ಹೋಗುವುದಿಲ್ಲ ಎಂದಿದ್ದಾರೆ.
ಭೀಮ್ ಆರ್ಮಿ ಪ್ರತಿಯೊಂದು ವಿಷಯದಲ್ಲೂ ರಸ್ತೆಗಿಳಿದು ಹೋರಾಡಿದೆ ಮತ್ತು ನನ್ನ ಸ್ವಾಭಿಮಾನದ ವಿಷಯದಲ್ಲಿ ನಾನು ಎಂದಿಗೂ ರಾಜಿ ಮಾಡಿಕೊಂಡಿಲ್ಲ. ನಾವು ಈಗ ಉತ್ತರ ಪ್ರದೇಶದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ದಲಿತರಿಲ್ಲದೆ ಎಸ್‌ಪಿ ಮೈತ್ರಿ ಟೊಳ್ಳಾಗಿದೆ ಎಂದು ಆಜಾದ್ ಹೇಳಿದರು.
ಹಿಂದುಳಿದ ವರ್ಗಗಳ ನಾಯಕರಾದ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಓಂಪ್ರಕಾಶ್ ರಾಜ್‌ಭರ್ ವಿರುದ್ಧ ತಮ್ಮ ಪಕ್ಷವು ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಫೆಬ್ರವರಿ 10 ರಂದು ಪ್ರಾರಂಭವಾಗಲಿದ್ದು, ಮಾರ್ಚ್ 7 ರವರೆಗೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ.