ನವದೆಹಲಿ:ಲೋಕಸಭೆಯಲ್ಲಿ ಶುಕ್ರವಾರ ಕ್ರಿಮಿನಲ್ ಕಾನೂನುಗಳಿಗೆ ಸಂಬಂಧಿಸಿದ ಮೂರು ವಿಧೇಯಕಗಳನ್ನು ಮಂಡಿಸಿರುವ ಬಗ್ಗೆ ಸಂಸದ ಹಾಗೂ ಮಾಜಿ ಕಾನೂನು ಸಚಿವ ಕಪಿಲ್ ಸಿಬಲ್ ಕಿಡಿ ಕಾರಿದ್ದಾರೆ. ಬ್ರಿಟಿಷರ ಕಾಲದ ಭಾರತೀಯ ದಂಡಸಂಹಿತೆ-1860 (IPC), ಅಪರಾಧ ಪ್ರಕ್ರಿಯೆ ಕಾಯ್ದೆ-1898 (CrPC) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ- 1872 (Evidence Act) ಅನ್ನು ಬದಲಿಸುವ ಹೊಸ ಮೂರು ಮಸೂದೆಗಳನ್ನು ಮಂಡಿಸಿರುವುದರ ಹಿಂದೆ ರಾಜಕೀಯ ದುರುದ್ದೇಶವಿಲ್ಲದೇ ಬೇರೇನು ಇಲ್ಲ ಎಂದು ಸಿಬಲ್ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ಈ ಬಗ್ಗೆ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ ಮಾಡಿಕೊಂಡಿರುವ ಅವರು, ಈ ಮಸೂದೆ ಮಂಡನೆ ಹಿಂದೆ ವಿರೋಧಿಗಳನ್ನು ಮೌನಗೊಳಿಸುವ ತಂತ್ರಗಾರಿಕೆ ಇದೆ. ಸರ್ಕಾರದ ಅಜೆಂಡಾವನ್ನು ಕೂಡ ಅಲ್ಲಗಳೆಯುವಂತಿಲ್ಲ. ತಮ್ಮ ರಾಜಕೀಯ ಉದ್ದೇಶಗಳಿಗಳನ್ನು ಈಡೇರಿಸಿಕೊಳ್ಳಲು ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುವ ಹುನ್ನಾರ ಅಡಗಿದೆ ಎಂದು ಅವರು ದೂರಿದ್ದಾರೆ.
ಲೋಕಸಭೆಯ ಮುಂಗಾರು ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಕಲಾಪದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಬ್ರಿಟಿಷ್ ಕಾಲದ ಕಾನೂನಿಗೆ ಬದಲಾಗಿ ನೂತನ ಮೂರು ಮಹತ್ವದ ಮಸೂದೆಗಳನ್ನು ಮಂಡನೆ ಮಾಡಿದರು. ಬ್ರಿಟಿಷರ ಕಾಲದ ಭಾರತೀಯ ದಂಡಸಂಹಿತೆ (IPC) ಇನ್ನು ಮುಂದೆ ಭಾರತೀಯ ನ್ಯಾಯ ಸಂಹಿತೆವಾಗಿ (BNS) ಬದಲಾದರೆ, ಅಪರಾಧ ಪ್ರಕ್ರಿಯೆ ಕಾಯ್ದೆ(CrPC) ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಆಗಿ ಬದಲಾಗಲಿದೆ. ಭಾರತೀಯ ಸಾಕ್ಷ್ಯ ಕಾಯ್ದೆ (Evidence Act)ಯು ಭಾರತೀಯ ಸಾಕ್ಷ್ಯ ಆಗಿ ಬದಲಾಯಿಸುವ ಅಂಶ ಮಸೂದೆಯಲ್ಲಿದೆ. ಕ್ರಮವಾಗಿ ಈ ಮೂರು ಕಾಯ್ದೆಗಳು ಜನತೆಗೆ ತ್ವರಿತ ನ್ಯಾಯ ಒದಗಿಸಲು ಮತ್ತು ಜನರ ಸಮಕಾಲೀನ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಉಳಿಸಿಕೊಳ್ಳುವ ಕಾನೂನು ವ್ಯವಸ್ಥೆಯನ್ನು ರಚಿಸಲು ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಶಾ ಅವರು ಲೋಕಸಭೆಯಲ್ಲಿ ಕೆಲವು ವಿವರಣೆ ನೀಡಿದರು.
ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮಸೂದೆಯು ದೇಶದ್ರೋಹ ಕಾನೂನನ್ನು ರದ್ದುಗೊಳಿಸುತ್ತದೆ. ಗುಂಪು ಹತ್ಯೆ ಮತ್ತು ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರದಂತಹ ಅಪರಾಧಗಳಿಗೆ ಗರಿಷ್ಠ ಮರಣದಂಡನೆ ನೀಡುವ ನಿಬಂಧನೆಗಳನ್ನು ಹೊಂದಿದೆ. ಸಣ್ಣ ಅಪರಾಧಗಳಿಗೆ ಶಿಕ್ಷೆಗಳಲ್ಲೊಂದಾಗಿ ಮೊದಲ ಬಾರಿಗೆ ಸಮುದಾಯ ಸೇವೆಯನ್ನು ಒದಗಿಸುವ ನಿಬಂಧನೆಗಳನ್ನು ಈ ಮಸೂದೆ ಹೊಂದಿದೆ. ಈ ಮೂರು ಹೊಸ ಕಾನೂನುಗಳ ಆತ್ಮವು ಸಂವಿಧಾನವು ನಾಗರಿಕರಿಗೆ ನೀಡಿರುವ ಎಲ್ಲಾ ಹಕ್ಕುಗಳನ್ನು ರಕ್ಷಿಸುತ್ತದೆ. ಇದು ಯಾರನ್ನೂ ಶಿಕ್ಷಿಸುವ ಉದ್ದೇಶವಲ್ಲ. ನ್ಯಾಯವನ್ನು ನೀಡುವುದು ಮತ್ತು ಅಪರಾಧವನ್ನು ತಡೆಗಟ್ಟುವುದು ಕಾನೂನಿನ ಕೆಲಸವೆಂದು ಅವರು ಇದೇ ವೇಳೆ ಹಲವು ವಿಚಾರಗಳನ್ನು ಹೇಳಿದ್ದಾರೆ.
ಆದರೆ, ಈ ಮೂರು ಮಸೂದೆಗಳ ಮಂಡನೆ ಕುರಿತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಕಿಡಿಕಾರಿದ್ದಾರೆ. "ತಮ್ಮ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಪೊಲೀಸ್ ಮತ್ತು ಇತರೆ ಇಲಾಖೆಗಳನ್ನು ದುರುಪಯೋಗಪಡಿಸಿಕೊಳ್ಳುವುದು ಈ ದೇಶದ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಬಿಜೆಪಿ ರಾಜಕೀಯ ವಿರೋಧಿಗಳ ಮೇಲೆ ಹೀಗೆ ನಾನಾ ಕಾರಣಗಳ ಮೂಲಕ ದಾಳಿ ಮಾಡುತ್ತಲೇ ಬಂದಿದೆ. ಅವರ ಅಣತಿಯಂತೆ ವರ್ತಿಸುವ ದೊಡ್ಡ ಪೊಲೀಸ್ ಪಡೆಯೇ ದೇಶದಲ್ಲಿದೆ. ಸಿಬಿಐ, ಇಡಿ, ಪೊಲೀಸ್ ಇಲಾಖೆ ಸೇರಿ ಹಲವು ಇಲಾಖೆಗಳು ರಾಜಕೀಯ ಅಧಿಕಾರಿಗಳ ಅಣತಿಯಂತೆ ನಡೆದುಕೊಳ್ಳುತ್ತಿವೆ ಅನ್ನೋದರಲ್ಲಿ ಎರಡು ಮಾತಿಲ್ಲ. ಭಾರತೀಯ ನ್ಯಾಯ ಸಂಹಿತೆ (BNS) ಎಂಬುದು ರಾಜ್ಯದ ಭದ್ರತೆಗೆ ಬೆದರಿಕೆಯೊಡ್ಡುವ ವ್ಯಕ್ತಿಗಳನ್ನು 15 ರಿಂದ 60 ಅಥವಾ 90 ದಿನಗಳವರೆಗೆ ಪೂರ್ವ ವಿಚಾರಣೆಗಾಗಿ ಪೊಲೀಸ್ ಅಥವಾ ಇಡಿ ಕಸ್ಟಡಿಗೆ ಅನುಮತಿಸುವ ಮಸೂದೆಯಾಗಿದೆ. ಇದೊಂದು ಎದುರಾಳಿ ಮತ್ತು ಜನರ ಬಾಯಿ ಮುಚ್ಚಿಸುವ ಕಾರ್ಯಸೂಚಿ. ಅಲ್ಲದೇ ಹೆಚ್ಚು ದುರುಪಯೋಗಕ್ಕೆ ದಾರಿ ಮಾಡಿಕೊಡುವ ವಿಧಾನ ಕೂಡ ಹೌದು'' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಬ್ರಿಟಿಷರ ಕಾಲದ IPC, CrPC, Evidence Actಗೆ ಗುಡ್‌ಬೈ! ಲೋಕಸಭೆಯಲ್ಲಿ ಹೊಸ 3 ಮಸೂದೆ ಮಂಡಿಸಿದ ಅಮಿತ್ ಶಾ