ಅನಂತಪುರ(ಆಂಧ್ರಪ್ರದೇಶ): ಯುವತಿಯನ್ನು ಕೊಲೆ ಮಾಡಿ ಸುಟ್ಟು ಹಾಕಿರುವ ಘಟನೆ ಅನಂತಪುರಂ ಜಿಲ್ಲೆಯ ಧರ್ಮಾವರಂನಲ್ಲಿ ನಡೆದಿದೆ.
ಸ್ನೇಹಲತಾ ಕೊಲೆಯಾದ ಯುವತಿ. ಈಕೆ ಧರ್ಮಾವರಂನ ಸ್ಟೇಟ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಮಂಗಳವಾರ ಕೆಲಸಕ್ಕೆಂದು ಹೋದವಳು ರಾತ್ರಿ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆ ಯುವತಿಯ ಪೋಷಕರು ಓನ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೊತೆಗೆ ಎಲ್ಲಾ ಸಂಬಂಧಿಕರಿಗೂ ಕರೆ ಮಾಡಿ ಮಗಳ ಬಗ್ಗೆ ವಿಚಾರಿಸಿದ್ದಾರೆ.
ನಿನ್ನೆ ಬಡಣ್ಣಪಲ್ಲಿ ಬಳಿ ಯುವತಿವೋರ್ವಳನ್ನು ಭಾಗಶಃ ಸುಟ್ಟುಹಾಕಲಾಗಿದೆ ಎಂದು ಪೊಲೀಸರಿಗೆ ಮಾಹಿತಿ ಬಂದಿದ್ದು, ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಸ್ನೇಹಲತಾ ಮೃತದೇಹ ಪತ್ತೆಯಾಗಿದೆ.
ಅನಂತಪುರಂನ ರಾಜೇಶ್ ಎಂಬಾತ ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದ. ರಾಜೇಶ್ ವಿರುದ್ಧ ಈ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದೆವು. ಇದೀಗ ಸೇಡು ತೀರಿಸಿಕೊಳ್ಳಲು ಸ್ನೇಹಿತನಾದ ಕಾರ್ತಿಕ್ ಜೊತೆಗೆ ಸೇರಿಸಿಕೊಂಡು ಮಗಳನ್ನು ಕೊಂದಿದ್ದಾನೆ ಎಂದು ಸ್ನೇಹಲತಾ ತಾಯಿ ಆರೋಪಿಸಿದ್ದಾರೆ.
ಈ ಕುರಿತು ಧರ್ಮಾವರಂ ಡಿಎಸ್ಪಿ ರಾಮಕಾಂತ್ ಸ್ಥಳ ಪರಿಶೀಲನೆ ನಡೆಸಿದ್ದು, ಆರೋಪಿಗಳಾದ ರಾಜೇಶ್ ಮತ್ತು ಕಾರ್ತಿಕ್ ಅವರನ್ನು ಬಂಧಿಸಲು ವಿಶೇಷ ತಂಡ ರಚಿಸಿದ್ದಾರೆ.