ಕರ್ನಾಟಕ

karnataka

ETV Bharat / bharat

ನಾವು ಭಾರತೀಯರು ಸಂವಿಧಾನ ರಕ್ಷಣೆ ಮತ್ತು ಆಶಯವನ್ನು ಎತ್ತಿ ಹಿಡಿಯಬೇಕಿದೆ - indian consistency 70th celebration

ವಿಶ್ವದಲ್ಲೇ ಅತಿ ದೊಡ್ಡ ಸಂವಿಧಾನವಾಗಿರುವ ಭಾರತದ ಸಂವಿಧಾನವು ಕೇವಲ ಕಾಗದಗಳ ಕಂತೆಯಲ್ಲ. ವಿಶ್ವದ ಜನಸಂಖ್ಯೆಯ ಶೇ 7 ರಷ್ಟಿರುವ ಭಾರತೀಯರ ಕನಸುಗಳನ್ನು ಸುಭದ್ರಗೊಳಿಸಿರುವ ದಾಖಲೆ ಇದು.

we are all indians
ನಾವು ಭಾರತೀಯರು, ಸಂವಿಧಾನ ರಕ್ಷಣೆ ಮತ್ತು ಆಶಯ ಎತ್ತಿಹಿಡಿಯ ಬೇಕಿದೆ

By

Published : Nov 27, 2019, 9:00 PM IST

ನಾವು ಭಾರತೀಯರು

ವಿಶ್ವದಲ್ಲೇ ಅತಿ ದೊಡ್ಡ ಸಂವಿಧಾನವಾಗಿರುವ ಭಾರತದ ಸಂವಿಧಾನವು ಕೇವಲ ಕಾಗದಗಳ ಕಂತೆಯಲ್ಲ. ವಿಶ್ವದ ಜನಸಂಖ್ಯೆಯ ಶೇಕಡಾ ಏಳರಷ್ಟಿರುವ ಭಾರತೀಯರ ಕನಸುಗಳನ್ನು ಸುಭದ್ರಗೊಳಿಸಿರುವ ದಾಖಲೆ ಇದು.

ಯಾವುದೇ ತಾರತಮ್ಯ ಇಲ್ಲದೇ ಸಮಾನತೆ ಮತ್ತು ನ್ಯಾಯವನ್ನು ಒದಗಿಸುವ ಬಗ್ಗೆ ಜನರಿಗೆ ಆತ್ಮವಿಶ್ವಾಸ ತುಂಬುವ ಕಾನೂನು ಇದು. ಇದರಲ್ಲಿ ಕಾಯ್ದೆಗಳಿಗಿಂತ ಉನ್ನತವಾದ ಸಂಕಲ್ಪವನ್ನು ನಾವು ಹೊಂದಿದ್ದೇವೆ. ದೃಢ ನಿಶ್ಚಯ, ಭರವಸೆ, ಭದ್ರತೆಯ ಜೊತೆಗೆ ಎಲ್ಲಕ್ಕಿಂತ ಹೆಚ್ಚಾಗಿ ನಾವು ದೊಡ್ಡ ಗುರಿಗೆ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇವೆ. ಇದನ್ನು 1946 ಡಿಸೆಂಬರ್‌ನಲ್ಲಿ ಸಂವಿಧಾನಕ್ಕೆ ಅನುಮೋದನೆ ನೀಡುವ ವೇಳೆ ಪಂಡಿತ್‌ ಜವಾಹರಲಾಲ ನೆಹರು ಅವರು ಹೇಳಿದ್ದಾರೆ.

ಸಂವಿಧಾನವನ್ನು ರೂಪಿಸುವಲ್ಲಿ ಹಲವು ಪ್ರಜ್ಞಾವಂತರು ಮತ್ತು ಪ್ರತಿಭಾವಂತರು ತಮ್ಮ ಪ್ರತಿಭೆ ಮತ್ತು ಪರಿಣಿತಿಯನ್ನು ಧಾರೆಯೆರೆದಿದ್ದಾರೆ. ಬ್ರಿಟಿಷರ ಸಂಕೋಲೆಯಿಂದ ಕಳಚಿಕೊಳ್ಳುವ ಸಮಯದಲ್ಲಿ ಒಡೆದು ಹೋಗಿದ್ದ ದೇಶವನ್ನು ಹಾಗೂ ದೇಶದ ಜನರನ್ನು ಒಂದಾಗಿಸಲು ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತ್ವವನ್ನೇ ಆಧಾರ ಸ್ಥಂಭವನ್ನಾಗಿ ಸಂವಿಧಾನವನ್ನು ಇವರು ರೂಪಿಸಿದ್ದಾರೆ.

ಅದ್ಭುತ ಪ್ರತಿಭೆಗಳು ಅತ್ಯುತ್ತಮ ಸಂವಿಧಾನವನ್ನು ರೂಪಿಸಿದ್ದು, ಇದರ 70ನೇ ವರ್ಷಾಚರಣೆಯನ್ನು ನಾವು ಸಂಭ್ರಮಿಸುತ್ತಿದ್ದೇವೆ.ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತ್ವವನ್ನು ಫ್ರಾನ್ಸ್‌ನ ಸಂವಿಧಾನದಿಂದ ಎರವಲು ಪಡೆಯಲಾಗಿದ್ದು, ಪಂಚವಾರ್ಷಿಕ ಯೋಜನೆಯನ್ನು ಸೋವಿಯತ್‌ ಯೂನಿಯನ್‌ನಿಂದ, ಐರ್ಲೆಂಡ್‌ನಿಂದ ಮೂಲಭೂತ ತತ್ವವನ್ನು ಮತ್ತು ಸಂವಿಧಾನದ ಪರಿಕಲ್ಪನೆಯನ್ನು ಜಪಾನ್‌ನಿಂದ ಎರವಲು ಪಡೆಯಲಾಗಿದೆ.

ಅಂಬೇಡ್ಕರ್‌ ಅವರ 125ನೇ ಜನ್ಮ ದಿನಾಚರಣೆಯನ್ನು ನವೆಂಬರ್‌ 26 ರಂದು ಆಚರಿಸಲು 2015 ರಲ್ಲಿ ಮೋದಿ ಸರ್ಕಾರ ನಿರ್ಧರಿಸಿತ್ತು. ದೇಶದ ಎಲ್ಲ ಶಾಲೆಗಳಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸಿ, 70 ವರ್ಷಗಳನ್ನು ಪೂರೈಸುತ್ತಿರುವ ನಮ್ಮ ಸಂವಿಧಾನದ ಪ್ರಾಮುಖ್ಯತೆಯನ್ನು ತಿಳಿಸುವಂತೆ ಕೇಂದ್ರ ಸರ್ಕಾರ ನಿರ್ದೇಶಿಸಿತ್ತು.

ಸಂವಿಧಾನ ಸ್ವರ್ಣ ಮಹೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಯಾಗಿದ್ದ ನಾರಾಯಣನ್‌, ಸಂವಿಧಾನದಿಂದ ನಾವು ವಿಫಲವಾಗಿದ್ದೇವೆಯೇ ಅಥವಾ ನಾವೇ ಸಂವಿಧಾನವನ್ನು ವಿಫಲಗೊಳಿಸಿದ್ದೇವೆಯೇ ಎಂಬುದರ ಆತ್ಮವಿಮರ್ಶೆಯನ್ನು ನಾವು ಮಾಡಿಕೊಳ್ಳಬೇಕಿದೆ ಎಂಬ ಅಮೂಲ್ಯ ಸಲಹೆಯನ್ನು ಮಾಡಿದ್ದರು.ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜನಸಾಮಾನ್ಯರಿಂದ ಆಡಳಿತಗಾರರವರೆಗೆ ಪ್ರತಿಯೊಬ್ಬರೂ ಸಂವಿಧಾನದ ಮೌಲ್ಯಗಳಿಗೆ ಬದ್ಧವಾಗಿರಬೇಕು.

ನಮ್ಮ ಉನ್ನತ ಗುರಿಗಳನ್ನು ತಲುಪುವ ನಿಟ್ಟಿನಲ್ಲಿ ಕ್ರಮ ಕೈಗೊಂಡಾಗ ಮಾತ್ರ ನಮ್ಮ ಬದ್ಧತೆ ಅರಿವಿಗೆ ಬರುತ್ತದೆ. ಕೇವಲ ಹೇಳಿಕೆ ನೀಡುವುದರಿಂದ ನಮ್ಮ ಬದ್ಧತೆಯನ್ನು ಪ್ರದರ್ಶಿಸಲಾಗದು ಎಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ನಾರಾಯಣನ್‌ ಹೇಳಿದ್ದರು. ಸಂವಿಧಾನಕ್ಕೆ 100 ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಮಾಡಿದರೂ, ನಮಗೆ ಬಡತನ, ಹಸಿವು ಹಾಗೂ ಅನಾರೋಗ್ಯ ಸಮಸ್ಯೆಯನ್ನು ನಿವಾರಿಸಲು ಈ 70 ವರ್ಷಗಳಲ್ಲಿ ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ಭಾರತವು ಮಾನವ ಸಂಪನ್ಮೂಲ ಅಭಿವೃದ್ಧಿ ಸೂಚ್ಯಂಕದಲ್ಲಿ ವಿಶ್ವದಲ್ಲೇ 130ನೇ ಸ್ಥಾನದಲ್ಲಿ ತೆವಳುತ್ತಿದೆ.

ಇದಕ್ಕೆ ಸೂಕ್ತ ಕಾರಣವನ್ನು ಹುಡುಕುವುದು ನಮ್ಮ ಸದ್ಯದ ಗುರಿಯಾಗಬೇಕಿದೆ. ರಾಜಕೀಯ ಭ್ರಷ್ಟಾಚಾರವು ಹರಡಿ ಗ್ರಾಮೀಣ ಪ್ರದೇಶವೂ ಸೇರಿದಂತೆ ಎಲ್ಲೆಡೆ ಆವರಿಸಿಕೊಂಡಿದೆ. ಪ್ರಧಾನಿ ಇಂದಿರಾ ಗಾಂಧಿಯವರ ಕಾಲದಿಂದಲೂ ಸಂವಿಧಾನದ ಮೌಲ್ಯಗಳನ್ನು ಆಡಳಿತ ವರ್ಗವು ಗಾಳಿಗೆ ತೂರಿದೆ. ಕೇವಲ ಗುರಿಗಳು ಸಾಲದು, ಅವುಗಳು ಸಾಧಿಸಲು ಅಗತ್ಯ ವಿಧಾನ ಮತ್ತು ರೀತಿಯು ನಮಗೆ ಅಗತ್ಯವಿದೆ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ.

ಸ್ವಾರ್ಥ ರಾಜಕಾರಣಿಗಳ ಮೂರ್ಖತನದಿಂದಾಗಿ ಭ್ರಷ್ಟಾಚಾರವು ದಶಕಗಳಿಂದಲೂ ಆವರಿಸಿಕೊಂಡಿದ್ದು, ದೇಶದಲ್ಲಿ ಕಪ್ಪುಹಣ ಸಂಗ್ರಹಕಾರರ ಒತ್ತಡಕ್ಕೆ ಬಿದ್ದು ಸರ್ಕಾರ ಶರಣಾಗುತ್ತಿರುವುದು ದೇಶದ ನೈತಿಕತೆ ಕುಸಿಯಲು ಕಾರಣವಾಗಿದೆ. ಅಪರಾಧ ಹಾಗೂ ಆರೋಪಗಳಿಂದಾಗಿ ಮಹತ್ವದ ಹುದ್ದೆಗಳನ್ನು ತೊರೆದವರು ಬಚಾವಾಗಲು ಸಂವಿಧಾನದಲ್ಲಿ ಅವಕಾಶಗಳಿವೆಯೇ ಎಂದು ಹುಡುಕುತ್ತಿದ್ದರೆ, ನಾವು ನಮ್ಮ ಸಾಮರ್ಥ್ಯ ಹಾಗೂ ದಕ್ಷತೆಯನ್ನು ಸಂಪೂರ್ಣ ಬಳಸಿಕೊಂಡು ಅಭಿವೃದ್ಧಿಯತ್ತ ಸಾಗಲು ಸಾಧ್ಯವಿದೆಯೇ ಎಂಬ ಆತಂಕವನ್ನು ಇತ್ತೀಚೆಗೆ ಪ್ರಧಾನಿಯವರು ವ್ಯಕ್ತಪಡಿಸಿದ್ದಾರೆ.

ಬಡತನಕ್ಕಿಂತ ಹೆಚ್ಚಾಗಿ ಆರ್ಥಿಕ ಅಸಮಾನತೆಯು ದೇಶಕ್ಕೆ ಅತಿದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ ಎಂದು ಅಧ್ಯಯನಗಳು ಆತಂಕ ವ್ಯಕ್ತಪಡಿಸುತ್ತಿವೆ. 1949ರ ನವೆಂಬರ್‌ 25 ರಂದು ಸಂವಿಧಾನವನ್ನು ರೂಪಿಸುವ ಅಂತಿಮ ಸಭೆಯಲ್ಲಿ ಅಂಬೇಡ್ಕರ್‌ ವ್ಯಕ್ತಪಡಿಸಿದ್ದ ಆತಂಕ ಈಗ ಹೆಚ್ಚು ಪ್ರಸ್ತುತವಾಗಿದೆ. ರಾಜಕಾರಣಕ್ಕೆ ಅತಿಯಾಗಿ ವೈಭವೀಕರಿಸುವುದರಿಂದ ಸರ್ವಾಧಿಕಾರ ಹುಟ್ಟುತ್ತದೆ ಎಂದು ಜನರ ವಿರೋಧವನ್ನೂ ಲೆಕ್ಕಿಸದೇ ಅಂಬೇಡ್ಕರ್‌ ಆಗ ಎಚ್ಚರಿಸಿದ್ದರು.

ದೀರ್ಘ ಕಾಲದವರೆಗೆ ಸಮಾನತೆಯು ಜನರಿಗೆ ಲಭ್ಯವಾಗದಿದ್ದರೆ ರಾಜಕೀಯ ಪ್ರಜಾಪ್ರಭುತ್ವವು ಅಪಾಯಕ್ಕೊಳಗಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಾಗರಿಕರು ಮತ್ತು ಸರ್ಕಾರಗಳು ಸಂವಿಧಾನದ ಮೌಲ್ಯಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರಬೇಕು. ಬಡತನಕ್ಕಿಂತ ದೊಡ್ಡ ಅವಮಾನ ಬೇರೊಂದಿಲ್ಲ ಎಂದು ಆಡಳಿತಗಾರರು ಅರಿತುಕೊಳ್ಳಬೇಕಿದೆ. ಬಡವರನ್ನು ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು.

ಜನರೇ ನಿಜವಾದ ರಾಜರು. ಹೀಗಾಗಿಯೇ ಸಂವಿಧಾನದಲ್ಲಿ “ನಾವು ಭಾರತೀಯರು” ಎಂದು ಉಲ್ಲೇಖಿಸಲಾಗಿದೆ. ಭ್ರಷ್ಟಾಚಾರವನ್ನು ದಕ್ಷವಾಗಿ ನಿರ್ಮೂಲನೆ ಮಾಡುವುದು, ಜವಾಬ್ದಾರಿಗಳನ್ನು ನಿರ್ವಹಿಸುವ ಬದ್ಧತೆ ಮತ್ತು ನಾಗರಿಕ ಹಕ್ಕುಗಳ ರಕ್ಷಣೆಯ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕಿದೆ.

ABOUT THE AUTHOR

...view details