ನವದೆಹಲಿ: ಕೊರೊನಾ ಸೋಂಕು ದೃಢಪಟ್ಟಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯನ್ನು ಬಿಟ್ಟು ಖಾಸಗಿ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡಿರುವುದು ಆಶ್ಚರ್ಯ ತರಿಸಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಶಶಿ ತರೂರ್ ''ಇದು ನನಗೆ ಆಶ್ಚರ್ಯ ತರಿಸಿದೆ. ಅವರು ಏಮ್ಸ್ನಲ್ಲಿ ಚಿಕಿತ್ಸೆ ಪಡೆಯಬಹುದಾಗಿತ್ತು. ಅದಕ್ಕೆ ಬದಲಿಯಾಗಿ ಅವರು ಖಾಸಗಿ ಆಸ್ಪತ್ರೆಯನ್ನು ಚಿಕಿತ್ಸೆಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ'' ಎಂದಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರು ಏಮ್ಸ್ ಆಸ್ಪತ್ರೆಯ ನೀಲನಕ್ಷೆಯನ್ನು ನೋಡುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿರುವ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಅವರು ''ಸಾರ್ವಜನಿಕ ಸಂಸ್ಥೆಗಳಿಗೆ ಪ್ರೋತ್ಸಾಹ ಅಗತ್ಯವಿದೆ. ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸಬಹುದಾಗಿತ್ತು'' ಎಂದು ಅಮಿತ್ ಶಾ ಅವರ ವಿರುದ್ಧ ಚಾಟಿ ಬೀಸಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಭಾನುವಾರ ಕೊರೊನಾ ಸೋಂಕು ಕಂಡು ಬಂದಿದ್ದು, ಟ್ವಿಟರ್ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಈಗ ಅವರು ಹರಿಯಾಣದ ಗುರ್ಗಾಂವ್ನಲ್ಲಿರುವ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾ ಸೋಂಕು ದೃಢಪಡುವುದಕ್ಕೂ ಮೊದಲು ಅಮಿತ್ ಶಾ ದೆಹಲಿಯಲ್ಲಿ ಲೋಕಮಾನ್ಯ ತಿಲಕರ ನೂರನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ನಡೆದ ಲೋಕಮಾನ್ಯ ತಿಲಕ್: ಸ್ವರಾಜ್ಯದಿಂದ ಆತ್ಮ ನಿರ್ಭರದೆಡೆಗೆ ಎಂಬುವ ವೆಬಿನಾರ್ನಲ್ಲಿ ಭಾಗವಹಿಸಿ ಮಾತನಾಡಿದ್ದರು.