ಹಿಮಾಚಲಪ್ರದೇಶ:ಮಹಿಳೆಯನ್ನು ಲಕ್ಷ್ಮಿ, ಸರಸ್ವತಿ ಹಾಗೂ ದುರ್ಗಾದೇವಿಯ ಅವತಾರ ಎಂದು ಹೇಳುತ್ತಾರೆ. ಲಕ್ಷ್ಮಿಬಾಯಿ, ಮದರ್ ತೆರೆಸಾ ಹಾಗೂ ಸಾವಿತ್ರಿ ಬಾಯಿ ಫುಲೆ ಅವರಂತಹ ನಾರಿಯರು ಈ ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಕಲ್ಪನಾ ಚಾವ್ಲಾ ಆಕಾಶದ ಎತ್ತರಕ್ಕೆ ಹಾರಿ, ಮಹಿಳೆಯು ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿದ್ದಾರೆ.
ಅಂತಹ ಒಂದು ಮಹಿಳಾ ಶಕ್ತಿ, ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯ ತವಾರಕು ದೇವಿ. ಇವರು ಇಂದು ಅನೇಕ ಮಹಿಳೆಯರ ಜೀವನವನ್ನೂ ಬೆಳಗಿಸಿದ್ದಾರೆ. ಮನೆಯಲ್ಲಿ ಉಪಯೋಗಕ್ಕೆ ಬಾರದೇ ಬಿಸಾಕಿದ ವಸ್ತುಗಳಿಗೆ ಮರು ಜೀವ ನೀಡಿ, ತಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಕೊಂಡಿದ್ದಾರೆ. ಅಲ್ಲದೇ ಗ್ರಾಮೀಣ ಮಹಿಳೆಯರಿಗೆ ಉದ್ಯೋಗದ ಬಾಗಿಲನ್ನು ತೆರೆದಿದ್ದಾರೆ.
ಎಂ.ಎ ಪದವಿ ಪಡೆದ ತವಾರಕು ದೇವಿ ತಿಂಗಳಿಗೆ ಸಂಬಳ ಬರುವ ಕೆಲಸದ ಹಿಂದೆ ಓಡಲಿಲ್ಲ. ಬದಲಿಗೆ ಸ್ವಯಂ ಉದ್ಯೋಗದ ಹಾದಿಯನ್ನು ಹಿಡಿದರು. 2011ರಲ್ಲಿ ಹಳ್ಳಿಯ ಕೆಲ ಮಹಿಳೆಯರೊಂದಿಗೆ ಕೈ ಜೋಡಿಸಿ, ತ್ಯಾಜ್ಯ ವಸ್ತುಗಳು ಮತ್ತು ಪೈನ್ ಎಲೆಗಳಿಂದ ಕಲಾತ್ಮಕ ಉತ್ಪನ್ನಗಳನ್ನು ತಯಾರಿಸಲು ಶುರು ಮಾಡಿದರು. ಸ್ಥಳೀಯ ಮೇಳಗಳಲ್ಲಿ ಆ ಉತ್ಪನ್ನಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗತೊಡಗಿತು.