ನವದೆಹಲಿ: ಸ್ವದೇಶಿ ಆ್ಯಪ್ಗಳನ್ನು ಬಳಸಿ ಸ್ವಾವಲಂಬಿ, ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಕೈಜೋಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 68ನೇ ಆವೃತ್ತಿಯಲ್ಲಿ ಮಾತನಾಡಿದ ಮೋದಿ, ಚೀನಾದ ಅಪ್ಲಿಕೇಶನ್ಗಳನ್ನು ಬ್ಯಾನ್ ಮಾಡಿದ ಬಳಿಕ ಆರಂಭವಾದ ನಮ್ಮದೇ ಹೊಸ ಆ್ಯಪ್ಗಳಾದ ಸ್ಟೆಪ್ ಸೆಟ್ ಗೋ, ಕುಟುಕಿಕಿಡ್ಸ್, ಚಿಂಗಾರಿ ಅಪ್ಲಿಕೇಶನ್ಗಳ ಕುರಿತು ಮಾಹಿತಿ ನೀಡಿದರು.
'ಸ್ಟೆಪ್ ಸೆಟ್ ಗೋ' ಎಂಬ ಫಿಟ್‌ನೆಸ್ ಆ್ಯಪ್ ಇದೆ. ಗಣಿತ, ವಿಜ್ಞಾನದ ಹಲವು ಅಂಶಗಳನ್ನು ಹಾಡುಗಳು ಮತ್ತು ಕಥೆಗಳ ಮೂಲಕ ಸುಲಭವಾಗಿ ಕಲಿಯಲು ಮಕ್ಕಳಿಗಾಗಿ 'ಕುಟುಕಿಕಿಡ್ಸ್' ಎಂಬ ಆ್ಯಪ್ ಇದೆ. ಹಾಗೂ ಸರ್ಕಾರಿ ಯೋಜನೆಯ ಬಗ್ಗೆ ಮಾಹಿತಿ ಪಡೆಯಲು 'AskSarkar' ಎಂಬ ಆ್ಯಪ್ ಪ್ರಾರಂಭವಾಗಿದೆ. ಟಿಕ್ಟಾಕ್ಗೆ ಸೆಡ್ಡು ಹೊಡೆದು 'ಚಿಂಗಾರಿ' ಆ್ಯಪ್ ಯುವಕರಲ್ಲಿ ಜನಪ್ರಿಯವಾಗುತ್ತಿದೆ ಎಂದ ಅವರು, ಇವುಗಳ ಉಪಯುಕ್ತತೆ ಪಡೆದುಕೊಳ್ಳುವುದರೊಂದಿಗೆ 'ಆತ್ಮ ನಿರ್ಭರ ಭಾರತ ಆ್ಯಪ್ ಇನೋವೇಶನ್ ಚಾಲೆಂಜ್'ಗೆ ಒತ್ತು ನೀಡುವಂತೆ ಹೇಳಿದರು.
ಇಮಾಮ್ ಹುಸೇನ್ರ ತ್ಯಾಗ ಸ್ಮರಿಸಿದ ಮೋದಿ
ಮೊಹರಂ ಅಥವಾ ಅಶುರಾ ದಿನದ ಅಂಗವಾಗಿ ಇಮಾಮ್ ಹುಸೇನ್ ಅವರ ತ್ಯಾಗವನ್ನು ಪ್ರಧಾನಿ ಇಂದು ಸ್ಮರಿಸಿದ್ದಾರೆ. ಇಮಾಮ್ ಹುಸೇನ್ ಅವರು ಸತ್ಯ, ಸಮಾನತೆ ಮತ್ತು ನ್ಯಾಯಕ್ಕೆ ಆದ್ಯತೆ ನೀಡಿದ್ದರು. ಇವರ ಆದರ್ಶಗಳು ಅನೇಕರಿಗೆ ಶಕ್ತಿ ನೀಡುತ್ತದೆ ಎಂದರು.