ನವದೆಹಲಿ: ಭಾರತ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೊಂಪೆ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ್ದಾರೆ.
ಪ್ರಧಾನಿ ಮೋದಿ ಭೇಟಿಯೊಂದಿಗೆ ಪ್ರವಾಸ ಆರಂಭಿಸಿರುವ ಪೊಂಪೆ, ಇದೀಗ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಭದ್ರತಾ ಸಲಹೆಗಾರ ಅಜಿತ್ ಧೋವಲ್ರ ಭೇಟಿಗೆ ಆಗಮಿಸಿದ್ದಾರೆ.
ಪ್ರಧಾನಿ ಭೇಟಿಯಾದ ಮೈಕ್ ಪೊಂಪೆ ಪೊಂಪೆ ಭಾರತದ ಭೇಟಿ ವೇಳೆ ಉಭಯ ದೇಶಗಳ ಹದಗೆಟ್ಟಿರುವ ಸಂಬಂಧದ ಬಗ್ಗೆ ಮಹತ್ವದ ಚರ್ಚೆ ನಡೆಯುವ ಸಾಧ್ಯತೆಯಿದೆ. ಭಾರತ ಹಾಗೂ ಅಮೆರಿಕ ನಡುವೆ ಕೆಲ ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯಗಳು ಉದ್ಭವವಾಗಿರುವ ಕಾರಣ ಪೊಂಪೆ ಭಾರತ ಪ್ರವಾಸದ ಮೇಲೆ ಸಾಕಷ್ಟು ಕುತೂಹಲ ಮೂಡಿದೆ.
ಪ್ರಧಾನಿ ಭೇಟಿಯಾದ ಮೈಕ್ ಪೊಂಪೆ ಮಾತುಕತೆಯ ಪ್ರಮುಖ ಅಂಶಗಳು ಹೀಗಿವೆ:
1. ರಷ್ಯಾದಿಂದ ಭಾರತಕ್ಕೆ ಎಸ್-400 ಮಿಸೈಲ್ ಆಮದು ಮಾಡುವ ಬಗ್ಗೆ 5 ಮಿಲಿಯನ್ ಅಮೆರಿಕನ್ ಡಾಲರ್ ಒಪ್ಪಂದ ಈಗಾಗಲೇ ನಡೆದಿದ್ದು ಅಮೆರಿಕಾಗೆ ಕೋಪ ತರಿಸಿತ್ತು ಹಾಗು ಒಪ್ಪಂದವನ್ನು ರದ್ದು ಮಾಡಲು ಒತ್ತಾಯಿಸಿತ್ತು. ಇಂದಿನ ಮೋದಿ-ಪೊಂಪೆ ಮಾತುಕತೆಯ ವೇಳೆ ಭಾರತ ತನ್ನ ನಿಲುವನ್ನು ಮತ್ತಷ್ಟು ಸ್ಪಷ್ಟಪಡಿಸಲಿದೆ.
2. ಹೆಚ್-1ಬಿ ವೀಸಾದ ಕುರಿತು ಇರುವ ಗೊಂದಲಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ. ಹೆಚ್-1ಬಿ ವೀಸಾದಲ್ಲಿ ಯಾವುದೇ ಬದಲಾವಣೆ ತರದಿರಲು ಟ್ರಂಪ್ ನಿರ್ಧರಿಸಿದ್ದು ಇದನ್ನು ಪೊಂಪೆ ಮಾತುಕತೆಯಲ್ಲಿ ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ. ಜೊತೆಗೆ ಉಭಯ ದೇಶಗಳ ನಡುವೆ ವಾಣಿಜ್ಯ ವ್ಯವಹಾರದಲ್ಲಿ ಕೆಲ ಭಿನ್ನಾಭಿಪ್ರಾಯಗಳು ತಲೆದೋರಿದ್ದು, ಇಂದಿನ ಭೇಟಿಯಲ್ಲಿ ತಾರ್ಕಿಕ ಅಂತ್ಯ ಕಾಣುತ್ತಾ ಎನ್ನುವ ಕುತೂಹಲವೂ ಇದೆ.
3. ಇರಾನ್ ದೇಶದಿಂದ ಭಾರತ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ವಿಚಾರವೂ ಅಮೆರಿಕಾದ ಕಣ್ಣು ಕೆಂಪಗಾಗಿಸಿತ್ತು. ಇರಾನ್ನಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳಿಗೆ ಅಮೆರಿಕಾ ಈ ಮೊದಲು ಕೆಲ ನಿರ್ಬಂಧ ಹೇರಿತ್ತು. ಭಾರತಕ್ಕೆ ಈ ವಿಚಾರದಲ್ಲಿ ಕೊಂಚ ವಿನಾಯಿತಿಯನ್ನೂ ನೀಡಿತ್ತು. ಈ ಎಲ್ಲ ಬೆಳವಣಿಗೆಗಳು ಮೋದಿ-ಪೊಂಪೆ ಮಾತುಕತೆಯಲ್ಲಿ ಪ್ರಸ್ತಾಪವಾಗಲಿದೆ.