ನವದಹಲಿ: ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದೆ. ಈ ಮಧ್ಯೆ ಆಗಸ್ಟ್ 5ರಿಂದ ದೇಶಾದ್ಯಂತ ಯೋಗ ಹಾಗೂ ಜಿಮ್ ಸೆಂಟರ್ ತೆರೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಇದರ ಜತೆಗೆ ರಾತ್ರಿ ಹೇರಲಾಗಿದ್ದ ಕರ್ಫ್ಯೂ ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ.
ಕೇಂದ್ರ ಗೃಹ ಸಚಿವಾಲಯ ಅನ್ಲಾಕ್ 3 ಗೈಡ್ಲೈನ್ಸ್ ರಿಲೀಸ್ ಮಾಡಿದ್ದು, ಆಗಸ್ಟ್ 31ರವರೆಗೆ ಶಾಲಾ, ಕಾಲೇಜು ಹಾಗೂ ಕೋಚಿಂಗ್ ಸೆಂಟರ್ಗಳು ಬಂದ್ ಇರಲಿವೆ ಎಂದು ತಿಳಿಸಿದೆ.
ಕಂಟೈನ್‌ಮೆಂಟ್ ಝೋನ್ಗಳಲ್ಲಿ ಆಗಸ್ಟ್ 31ರವರೆಗೂ ಲಾಕ್ಡೌನ್ ಮುಂದುವರಿಕೆಯಲಿದೆ. ಮೆಟ್ರೋ, ಸಿನಿಮಾ ಹಾಲ್, ಸ್ವಿಮ್ಮಿಂಗ್ ಪೂಲ್, ಮನರಂಜನಾ ಉದ್ಯಾನಗಳು, ಚಿತ್ರಮಂದಿರ, ಬಾರ್, ಸಭಾಂಗಣಗಳು, ಅಸೆಂಬ್ಲಿ ಹಾಲ್ಗಳು ಸಂಪೂರ್ಣವಾಗಿ ಬಂದ್ ಇರಲಿವೆ.
ವಿಮಾನಯಾನಕ್ಕಿದ್ದ ನಿರ್ಬಂಧ ತೆರವುಗೊಳಿಸಲಾಗಿದ್ದು, ಭಾರತ ಮಿಷನ್ ಅಡಿಯಲ್ಲಿ ವಿಮಾನಗಳು ಹಾರಾಟ ನಡೆಸಲಿವೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಲು ಅನುಮತಿಸಲಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಪ್ರಮುಖ ಅಂಶಗಳು ಇಂತಿವೆ:
- ಇನ್ಮುಂದೆ ರಾತ್ರಿ ವೇಳೆ ನಿರ್ಬಂಧವಿಲ್ಲದೆ ಆರಾಮವಾಗಿ ಓಡಾಡಬಹುದು.
- 2020 ಆಗಸ್ಟ್ 5 ರಿಂದ ಯೋಗ ಕೇಂದ್ರಗಳು ಹಾಗೂ ಜಿಮ್ ಕೇಂದ್ರಗಳನ್ನು ಆರಂಭಿಸಲು ಒಪ್ಪಿಗೆ.
- ಕೋವಿಡ್-19 ಹರಡದಂತೆ ತಡೆಯಲು ಸಾಮಾಜಿಕ ಅಂತರ ಸೇರಿ ಸದ್ಯದಲ್ಲೇ ಹೊಸ ನಿಯಮಾವಳಿ ಬಿಡುಗಡೆ ಮಾಡಲಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
- ಆಗಸ್ಟ್ 31ರವರೆಗೂ ಶಾಲೆ, ಕಾಲೇಜು ಮತ್ತು ಕೋಚಿಂಗ್ ಸೆಂಟರ್ಗಳನ್ನು ತೆರೆಯವಂತಿಲ್ಲ.
- 'ವಂದೇ ಭಾರತ್' ಮಿಷನ್ ಅಡಿಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಸೀಮಿತ ಅನುಮತಿ
- ಮೆಟ್ರೋ ರೈಲು, ಚಿತ್ರ ಮಂದಿರಗಳು, ಸ್ವಿಮ್ಮಿಂಗ್ ಪೂಲ್, ಮನರಂಜನಾ ಕೇಂದ್ರಗಳು, ಮಲ್ಟಿಪ್ಲೆಕ್ಸ್, ಬಾರ್ಗಳು, ಆಡಿಟೋರಿಯಂಗಳು, ಸಮುದಾಯ ಭವನಗಳನ್ನು ತೆರೆಯುವಂತಿಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ಇವೆಲ್ಲವುಗಳ ಪುನಾರಂಭಕ್ಕೆ ಅನುಮತಿ.
- ರಾಜ್ಯದೊಳಗೆ ಸಂಚರಿಸುವ ಮತ್ತು ಅಂತಾರಾಜ್ಯಗಳಿಗೆ ಹೋಗುವ ಪ್ರಯಾಣಿಕರಿಗೆ ವಿಧಿಸಿದ್ದ ನಿರ್ಬಂಧ ತೆಗೆದು ಹಾಕಿದ ಕೇಂದ್ರ ಸರ್ಕಾರ. ಬೇರೆ ರಾಜ್ಯಗಳಿಗೆ ಹೋಗಲು ಯಾವುದೇ ಅನುಮತಿ ಪತ್ರ, ಇ-ಪರ್ಮಿಶನ್ ಬೇಕಿಲ್ಲ.
- ಆಗಸ್ಟ್ 31ರವರೆಗೂ ಕಂಟೈನ್‌ಮೆಂಟ್ ಝೋನ್ಗಳಲ್ಲಿ ಮುಂದುವರಿಯಲಿದೆ ಲಾಕ್ಡೌನ್ ಕಠಿಣ ನಿರ್ಬಂಧ
- ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಕಂಟೈನ್‌ಮೆಂಟ್ ಝೋನ್ ಹೊರತುಪಡಿಸಿ ಕೆಲವು ನಿರ್ಬಂಧಗಳನ್ನು ಹೇರಲು ಆಯಾ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.