ನವದೆಹಲಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಡಿಸ್ಪ್ಲೇ ಪಿಕ್ಚರ್ (ಡಿಪಿ) ಅನ್ನು ಗುರುವಾರ ರಾತ್ರಿ ತೆಗೆದುಹಾಕಿದ್ದ ಟ್ವಿಟ್ಟರ್ ಕೆಲ ಗಂಟೆಗಳ ನಂತರ ಮತ್ತೆ ಹಾಕಿದೆ.
ಚಿತ್ರದ ಮೇಲೆ ಕಾಪಿರೈಟ್ ಹಕ್ಕು ಸಾಧಿಸಿದ ನಂತರ ಟ್ವಿಟ್ಟರ್ ಈ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ. ಆದರೂ ಟ್ವಿಟ್ಟರ್ ಕ್ರಮಕ್ಕೆ ಪ್ರಶ್ನೆಗಳು ಉದ್ಭವಿಸಿದ ತಕ್ಷಣ, ಅದೇ ಚಿತ್ರವನ್ನು ಮತ್ತೆ ಹಾಕಲಾಗಿದೆ.
ಗುರುವಾರ ರಾತ್ರಿ, ಅಮಿತ್ ಶಾ ಅವರ ಡಿಪಿ ತೆಗೆದುಹಾಕಲಾಗಿತ್ತು. ಕಾಪಿರೈಟ್ ಕಾರಣದಿಂದಾಗಿ ಫೋಟೋ ತೆಗೆದುಹಾಕಲಾಗಿದೆ ಎಂದು ಟ್ವಿಟ್ಟರ್ ಸಂದೇಶದಲ್ಲಿ ತಿಳಿಸಿತ್ತು. "ಅಜಾಗರೂಕ ದೋಷದಿಂದಾಗಿ, ನಮ್ಮ ಜಾಗತಿಕ ಕಾಪಿರೈಟ್ ನೀತಿಗಳ ಅಡಿಯಲ್ಲಿ ನಾವು ಈ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಿದ್ದೇವೆ. ತಕ್ಷಣವೇ ಈ ನಿರ್ಧಾರವನ್ನು ಬದಲಿಸಿದ್ದು ಖಾತೆ ಸಂಪೂರ್ಣವಾಗಿ ಕ್ರಿಯಾತ್ಮಕವಾಗಿದೆ" ಎಂದು ಟ್ವಿಟ್ಟರ್ ವಕ್ತಾರರು ಮಾಹಿತಿ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅಮಿತ್ ಶಾ ಬಹಳ ಜನಪ್ರಿಯರಾಗಿದ್ದು, ಟ್ವಿಟ್ಟರ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯ ನಂತರ ದೇಶದ ಎರಡನೇ ನಾಯಕರಾಗಿದ್ದಾರೆ. ಅವರು 23.6 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.