ವಯನಾಡ್: ಕೇರಳ ಮೂಲದ ಪಶುವೈದ್ಯರು ತಂತ್ರಜ್ಞಾನದ ನೆರವಿನಿಂದ 3,000 ಕಿ.ಮೀ. ದೂರದ ಮಲೇಷ್ಯಾದಲ್ಲಿನ ಅಪರೂಪದ ರೋಗ ಪೀಡಿತ ಶ್ವಾನ ಮರಿಗೆ ಯಶಸ್ವಿಯಾಗಿ ಟೆಲಿ ಗೈಡೆಡ್ ಸರ್ಜರಿ (ಟಿಜಿಎಸ್) ನಡೆಸಿದ್ದಾರೆ.
ಮ್ಯಾಕ್ಸ್, ಮಲೇಷ್ಯಾದ ಪೆನಾಂಗ್ ಬಳಿಯ ವಿಂಡ್ಸರ್ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತಿತ್ತು. ಮಿನಿಯೇಚರ್ ಪಿನ್ಷರ್ ತಳಿಯ ಎರಡು ತಿಂಗಳ ನಾಯಿಮರಿ ಕೇರಳ ವೈದ್ಯರ ಚಿಕಿತ್ಸೆಯಿಂದಾಗಿ ಬದುಕಿ ಉಳಿದಿದೆ ಎಂದು ಡಾ.ಎಸ್. ಸೂರ್ಯದಾಸ್ ತಿಳಿಸಿದರು.
ನಾಯಿಮರಿಯನ್ನು ಮಲೇಷ್ಯಾದ ಆಸ್ಪತ್ರೆಗೆ ಕರೆತಂದಾಗ ಶ್ವಾನದ ಉಂಗುರ ರೋಗದಿಂದ ಬಳಲುತ್ತಿತ್ತು. ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ (ಕೆವಿಎಎಸ್ಯು) ವೆಟ್ಸ್ ತಂಡ, ಮಂಗಳವಾರ ಟೆಲಿಮೆಡಿಸಿನ್ ವ್ಯವಸ್ಥೆ ಬಳಸಿಕೊಂಡು ಸಂಕೀರ್ಣವಾದ ಶಸ್ತ್ರಚಿಕಿತ್ಸೆಯ ಮಾರ್ಗದರ್ಶನ ನೀಡಿದರು.
ಪೆನಾಂಗ್‌ನ ವೈದ್ಯರು ವಯನಾಡಿನಲ್ಲಿ ಸಾವಿರಾರೂ ಮೈಲಿ ದೂರದಲ್ಲಿರುವ ಆಸ್ಪತ್ರೆಯನ್ನು ಹೇಗೆ ಪತ್ತೆ ಹಚ್ಚಿದ್ದರು ಎಂಬುದು ಅಷ್ಟೇ ಆಸಕ್ತಿದಾಯಕವಾಗಿದೆ. ಕೆವಿಎಎಸ್ಯುನ ಹಳೆಯ ವಿದ್ಯಾರ್ಥಿ ಡಾ.ಶಿಬು ಸುಲೈಮಾನ್, ಮಲೇಷ್ಯಾದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮ್ಯಾಕ್ಸ್ ಬಳಲುತ್ತಿರುವ ಅಪರೂಪದ ಕಾಯಿಲೆಯ ಬಗ್ಗೆ ತಿಳಿದು, ಅಲ್ಲಿನ ಪಶುವೈದ್ಯಕೀಯ ವೈದ್ಯರೊಂದಿಗೆ ಸಮಾಲೋಚಿಸಿದ ನಂತರ ಟೆಲಿ ಗೈಡೆಡ್ ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದಾರೆ.