ತಿರುಪತಿ (ಆಂಧ್ರ ಪ್ರದೇಶ):ಕೊರೊನಾ ಪ್ರೇರಿತ ಲಾಕ್ಡೌನ್ನಿಂದಾಗಿ ಎರಡು ತಿಂಗಳಿಂದ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನವಿಲ್ಲ. ಲಾಕ್‌ಡೌನ್ ಕೊಂಚ ಸಡಿಲಿಕೆ ಬೆನ್ನಲ್ಲೆ ಭಕ್ತರಿಗೆ ಶೇ.50ರಷ್ಟು ಸಬ್ಸಿಡಿ ದರದಲ್ಲಿ ಲಡ್ಡು ಪ್ರಸಾದ ವಿತರಿಸಲು ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ (ಟಿಟಿಡಿ) ನಿರ್ಧಾರ ಕೈಗೊಂಡಿದೆ.
ಆಂಧ್ರಪ್ರದೇಶದ ಎಲ್ಲ 13 ಜಿಲ್ಲಾ ಕೇಂದ್ರಗಳಲ್ಲಿ, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನ ಎಲ್ಲ ಟಿಟಿಡಿ ಮಾಹಿತಿ ಕೇಂದ್ರಗಳು ಹಾಗೂ ಮದುವೆ ಮಂಟಪಗಳಲ್ಲಿ ಲಡ್ಡು ಪ್ರಸಾದ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ತಿಳಿಸಿದರು.
ಸಾಮಾನ್ಯ ದಿನಗಳಲ್ಲಿ 50 ರೂಪಾಯಿಗೆ ಮಾರಾಟ ಮಾಡುತ್ತಿದ್ದ 175 ಗ್ರಾಂ. ತೂಕದ ಲಡ್ಡುವನ್ನು ರಿಯಾಯಿತಿ ದರದಲ್ಲಿ 25 ರೂಪಾಯಿಗೆ ಭಕ್ತರಿಗೆ ನೀಡಲಾಗುತ್ತದೆ. ಇನ್ನೂ ಎರಡು ಮೂರು ದಿನಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.