ಜೆಮ್ಶೆಡ್ಪುರ (ಜಾರ್ಖಂಡ್): ದುಷ್ಕರ್ಮಿಗಳು ಪರ್ವತಾರೋಹಿಯೊಬ್ಬರು ಗಳಿಸಿದ್ದ ಪದ್ಮಶ್ರೀ ಪ್ರಶಸ್ತಿ ಜೊತೆಗೆ ಹಲವಾರು ವಸ್ತುಗಳನ್ನು ಕದ್ದು ಪರಾರಿಯಾಗಿರುವ ಘಟನೆ ಜಾರ್ಖಂಡ್ನ ಜೆಮ್ಶೆಡ್ಪುರದಲ್ಲಿ ನಡೆದಿದೆ
ಪರ್ವತಾರೋಹಿಯಾಗಿರುವ ಪ್ರೇಮಲತಾ ಅಗರ್ವಾಲ್ ಅವರ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ವೆಂಟಿಲೇಟರ್ ಹಾಗೂ ಕಿಟಕಿ ಮುರಿದು ಒಳನುಗ್ಗಿ, ಪದ್ಮಶ್ರೀ ಪದಕದ ಜೊತೆಗೆ ಬೆಳ್ಳಿ ನಾಣ್ಯಗಳು, ಕಂಪ್ಯೂಟರ್ನ ಬಿಡಿಭಾಗಗಗಳು ಹಾಗೂ 20 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳು ಬಾಗಿಲು ತೆರಯಲು ಪ್ರಯತ್ನಿಸಿದ್ದು, ಸಾಧ್ಯವಾಗದೇ ಇದ್ದಾಗ ವೆಂಟಿಲೇಟರ್ ತೆರೆದು ಅದರ ಮೂಲಕ ಒಳನುಗ್ಗಿದ್ದಾರೆ ಎಂದು ಪ್ರೇಮಲತಾ ಅಗರ್ವಾಲ್ ಪತಿ ವಿಮಲ್ ಅಗರ್ವಾಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ನಗರ ಎಸ್ಪಿ ಸುಭಾಷ್ ಚಂದ್ರ ಜಾಟ್, ಮನೆಯವರು ನೀಡಿದ ದೂರು ದಾಖಲಿಸಿಕೊಳ್ಳಲಾಗಿದೆ. ಕದ್ಮಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರೇಮಲತಾ ಅಗರ್ವಾಲ್ 2011 ಮೇ ತಿಂಗಳಲ್ಲಿ ತಮ್ಮ 48 ವರ್ಷದಲ್ಲಿ ಮೌಂಟ್ ಎವರೆಸ್ಟ್ ಪರ್ವತವನ್ನು ಏರಿದ ಅತಿ ಹಿರಿಯ ಮಹಿಳೆ ಎಂಬ ದಾಖಲೆ ಸೃಷ್ಟಿಸಿದ್ದರು.