ಮಣಿಪುರ:ಭಾರತದ ಈಶಾನ್ಯ ಪ್ರದೇಶಗಳಲ್ಲಿ ವಿವಿಧ ರೀತಿಯ ಕಲೆಗಳು ಪ್ರಚಲಿತದಲ್ಲಿದ್ದು, ಜನರು ಕ್ರಿಯಾತ್ಮಕವಾಗಿ ಯಾವುದಾದರೊಂದು ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಮಣಿಪುರದ ಮಾವೊದ ಸಾಂಗ್‌ಸೊಂಗ್ ಗ್ರಾಮದ ಕಲಾವಿದನೊಬ್ಬ ಕಸದಿಂದ ರಸ ತಯಾರಿಸಿ ಸೈ ಎನಿಸಿಕೊಂಡಿದ್ದಾನೆ.
ಹೌದು, ಮಣಿಪುರದ ಮಾವೊದ ಸಾಂಗ್‌ಸೊಂಗ್ ಗ್ರಾಮದ ನಿವಾಸಿಯಾಗಿರುವ ಕಲಾವಿದ ನೆಲ್ಲಿ ಚಾಚೈ, ತ್ಯಾಜ್ಯದಿಂದ ಗೊಂಬೆಗಳನ್ನು ತಯಾರಿಸಿದ್ದು ಜನರನ್ನು ಆಕರ್ಷಿಸುತ್ತಿವೆ.
ಚಾಚೈ ಇತರ ಕಲಾವಿದರಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ತ್ಯಾಜ್ಯ ವಸ್ತುಗಳಿಂದ ಕಲಾತ್ಮಕ ವಸ್ತುಗಳನ್ನು ತಯಾರು ಮಾಡುತ್ತಿರುವ ಇವರ ಕೈಯಲ್ಲಿ ಮೂಡಿರುವ ರಂಗು ರಂಗಿನ ಗೊಂಬೆಗಳು ಅತ್ಯಾಕರ್ಷಕವಾಗಿವೆ. ಈ ಮೂಲಕ ತ್ಯಾಜ್ಯ ಸ್ವಚ್ಛವಾಗುವುದರ ಜೊತೆಗೆ ತಮ್ಮೊಳಗಿನ ಕ್ರಿಯಾತ್ಮಕತೆಯನ್ನು ಹೆಚ್ಚುವಂತೆ ಮಾಡಿದ್ದಾರೆ ಈ ಕಲಾವಿದ.
ಬಾಲ್ಯದಲ್ಲಿ ನನ್ನ ತಾಯಿ ಗೊಂಬೆಗಳನ್ನು ತಯಾರಿಸಲು ಕಲಿಸಿಕೊಟ್ಟಿದ್ದರು. 2002ರಲ್ಲಿ ಅದನ್ನು ವೃತ್ತಿಯಾಗಿ ಸ್ವೀಕರಿಸಿ, 2005ರಲ್ಲಿ ಗೊಂಬೆಗಳ ಕಾರ್ಯಗಾರ ತೆರೆದಿದ್ದೇನೆ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಸದ್ಯ ದಿನದಲ್ಲಿ 10 ರಿಂದ 12 ಗೊಂಬೆಗಳನ್ನು ತಯಾರಿಸಿ, ಪ್ರತೀ ಗೊಂಬೆಯನ್ನು 200 ರಿಂದ 500 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ.
ಚಾಚೈ ಅವರದ್ದೇ ಸ್ವಂತ ಹೂ ಹಾಗೂ ಸಸ್ಯ ಮಳಿಗೆಯಿದ್ದು, ಅಲ್ಲೆ ಈ ಗೊಂಬೆಗಳನ್ನು ಸಹ ಮಾರಲಾಗುತ್ತಿದೆ. ಕೇವಲ ಮಣಿಪುರದಲ್ಲಿ ಮಾತ್ರವಲ್ಲದೇ ಭಾರತದ ಕೆಲವು ರಾಜ್ಯಗಳಲ್ಲಿ ಈ ಗೊಂಬೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.