ನವದೆಹಲಿ: 1930ರಲ್ಲಿ ಮಹಾತ್ಮ ಗಾಂಧಿ ನಡೆಸಿದ ದಂಡಿ ಸತ್ಯಾಗ್ರಹದ ಸ್ಮರಣೆಯಾಗಿ ಒಂದೆಡೆ ಗುಜರಾತ್ನ ಸಬರಮತಿ ಆಶ್ರಮದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಭೆ ನಡೆಯುತ್ತಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ, ಬ್ಲಾಗ್ನಲ್ಲಿಯೇ ಕಾಂಗ್ರೆಸ್ ಪಕ್ಷ ಗಾಂಧಿ ತತ್ವ ವಿರೋಧಿ ಎಂದು ಕಟು ಟೀಕೆ ಮಾಡಿದ್ದಾರೆ.
ಮಹಾತ್ಮ ಗಾಂಧಿ ಅವರು ತಮ್ಮ ಪ್ರತಿ ಕೆಲಸದಲ್ಲಿಯೂ ಅಸಮಾನತೆ, ಜಾತೀಯತೆ ವಿರುದ್ಧ ನಿಲವು ತೋರಿದ್ದರು. ಆದರೆ ಇಂದು ಕಾಂಗ್ರೆಸ್ ಸಮಾಜವನ್ನು ಒಡೆದುಹಾಕುವಲ್ಲಿ ನಿರತವಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಜಾತಿ ಕಲಹಗಳು, ದಲಿತ ವಿರೋಧಿ ಘಟನೆಗಳೇ ನಡೆದವು ಎಂದು ಕುಟುಕಿದ್ದಾರೆ.
ಗಾಂಧಿ ಚಿಂತನೆಗಳು ಹಾಗೂ ಕಾಂಗ್ರೆಸ್ ಸಂಸ್ಕೃತಿ ಎಂದು ಎರಡು ಪಟ್ಟಿಗಳನ್ನು ಮಾಡಿ, ಮೋದಿ ಛೇಡಿಸಿದ್ದಾರೆ. ಕಾಂಗ್ರೆಸ್ ಸಂಸ್ಕೃತಿ ಏನೆಂಬುದನ್ನು ಅರಿತೇ ಮಹಾತ್ಮ ಗಾಂಧಿ ಅವರು 1947ರ ನಂತರ ಪಕ್ಷದಿಂದ ದೂರ ಉಳಿದರು.
ಅಸಮರ್ಪಕ ಆಡಳಿತ ಹಾಗೂ ಭ್ರಷ್ಟಾಚಾರ ಜತೆಯಾಗಿ ಸಾಗುತ್ತವೆ ಎಂಬ ಗಾಂಧಿ ವಾಕ್ಯವನ್ನು ಉಲ್ಲೇಖಿಸಿರುವ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿತ್ತು. ನಮ್ಮ ಸರ್ಕಾರ ಭ್ರಷ್ಟಾಚಾರವನ್ನು ಹತ್ತಿಕ್ಕುವಲ್ಲಿ ಎಲ್ಲ ರೀತಿಯ ಕ್ರಮ ಕೈಗೊಂಡಿತು ಎಂದಿದ್ದಾರೆ.
ಬಡವರಿಗೆ ಅಗತ್ಯ ಸೌಕರ್ಯ ನೀಡುವ ಬದಲು ಕಾಂಗ್ರೆಸ್ ನಾಯಕರು ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ತುಂಬಿಸಿಕೊಂಡರು, ವಿಲಾಸಿ ಜೀವನ ನಡೆಸಿದರು. ರಕ್ಷಣೆ, ಟೆಲಿಕಾಂ, ನೀರಾವರಿ, ಕ್ರೀಡೆ ಎಲ್ಲಾ ವಲಯಗಳಲ್ಲಿ ಭ್ರಷ್ಟಾಚಾರ ಮಾಡಿದರು ಎಂದು ಆರೋಪಿಸಿದರು.
1975ರ ತುರ್ತು ಪರಿಸ್ಥಿತಿ ಬಗ್ಗೆ ತಿರುಗೇಟು ನೀಡಿದ ಅವರು, ಗಾಂಧಿ ಹೇಳಿದಂತೆ, ದುರ್ಬಲರು, ಸಬಲರಾಗಲು ಅವಕಾಶ ನೀಡುವುದೇ ಪ್ರಜಾಪ್ರಭುತ್ವ. ಆದರೆ ಇದಕ್ಕೆ ತದ್ವಿರುದ್ಧವಾಗಿ, ಕಾಂಗ್ರೆಸ್ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿತು. ಪ್ರಜಾಪ್ರಭುತ್ವ ಮೌಲ್ಯಗಳನ್ನು ತುಳಿಯಲೆತ್ನಿಸಿತು ಎಂದು ಛೇಡಿಸಿದರು.
ಇಂದಿನ ನಮ್ಮ ಸರ್ಕಾರ ಬಾಪು ಹಾದಿಯಲ್ಲಿ ಸಾಗುತ್ತಾ, ಜನರ ಕನಸುಗಳನ್ನು ಈಡೇಸಿದೆ ಎಂದೂ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.