ಆಗ್ರಾ (ಉತ್ತರ ಪ್ರದೇಶ):ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ತಾಜ್ ಮಹಲ್ ಇಂದಿನಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದೆ. ಪ್ರೇಮಸೌಧ ಎಂದೇ ಕರೆಯಲ್ಪಡುವ ತಾಜ್ ಮಹಲ್ ಸೌಂದರ್ಯವನ್ನು ಇಂದಿನಿಂದ ಪ್ರವಾಸಿಗರು ತಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳಬಹುದು. ಆದರೆ ತಾಜ್ ಮಹಲ್ ಪ್ರವೇಶಕ್ಕೆ ಕೆಲವು ನಿಯಮಗಳು ಕಡ್ಡಾಯ. ಪ್ರವಾಸಿಗರು ಮಾಸ್ಕ್ ಧರಿಸಬೇಕು. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
ಕೊರೊನಾ ವೈರಸ್ ಸೋಂಕಿನ ಕಾರಣದಿಂದಾಗಿ ಭಾರತೀಯ ಪುರಾತತ್ವ ಇಲಾಖೆ ಮಾರ್ಚ್ 17ರಿಂದ ತಾಜ್ಮಹಲ್ ಬಂದ್ ಮಾಡಿತ್ತು. ಈಗ ತಾಜ್ಮಹಲ್ ಕಣ್ತುಂಬಿಕೊಳ್ಳುವ ಭಾಗ್ಯ ಇಂದಿನಿಂದ ಪ್ರವಾಸಿಗರಿಗೆ ಸಿಗಲಿದೆ. 188 ದಿನಗಳ ನಂತರ ಪ್ರೇಮಸೌಧವನ್ನು ಮತ್ತೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
ತಾಜ್ ಮಹಲ್ಗೆ ಭೇಟಿ ನೀಡುವ ಪ್ರವಾಸಿಗರಿಗೆ ಸೋಂಕು ಹರಡದಂತೆ ಹೊಸ ವ್ಯವಸ್ಥೆ ಮಾಡಲಾಗಿದೆ. ನೂತನ ವ್ಯವಸ್ಥೆಯ ಪ್ರಕಾರ ದಿನವೊಂದಕ್ಕೆ 5 ಸಾವಿರ ಪ್ರವಾಸಿಗರಿಗಷ್ಟೇ ತಾಜ್ ಮಹಲ್ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಈ ಕಾರಣಕ್ಕಾಗಿ ಎರಡು ಶಿಫ್ಟ್ಗಳನ್ನು ಮಾಡಲಾಗಿದೆ. ಮೊದಲ ಶಿಫ್ಟ್ನಲ್ಲಿ ಎರಡೂವರೆ ಸಾವಿರ ಪ್ರವಾಸಿಗರಿಗೆ ಅನುಮತಿ ನೀಡಲಾಗುವುದು. ಎರಡನೇ ಪಾಳಿಯಲ್ಲಿ ಉಳಿದ ಎರಡೂವರೆ ಸಾವಿರ ಪ್ರವಾಸಿಗರಿಗೆ ಒಳಗೆ ಬಿಡಲಾಗುವುದು.
ಪ್ರವಾಸಿಗರಿಗೆ ತೊಂದರೆಯಾಗದಂತೆ ಆಗ್ರಾ ಪೊಲೀಸರು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ಗ್ರೂಪ್ ಫೋಟೋ ತೆಗೆಯಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಟಿಕೆಟ್ ಕೌಂಟರ್ ಬಂದ್ ಮಾಡಲಾಗಿದ್ದು, ಪ್ರವಾಸಿಗರು ಆನ್ಲೈನ್ನಲ್ಲೇ ಟಿಕೆಟ್ ಪಡೆಯಬೇಕಾಗಿದೆ.