ಕೋಲ್ಕತ್ತಾ:ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಆಯ್ಕೆ ಬಹುತೇಕ ಫೈನಲ್ ಆಗಿದೆ. ಆದರೆ, ಇವರ ನೇಮಕದ ಹಿಂದೆ ಬಿಜೆಪಿ ರಾಜಕೀಯ ಲೆಕ್ಕಾಚಾರವಿದೆ ಎಂಬ ಮಾತು ಜೋರಾಗಿ ಕೇಳಿ ಬರುತ್ತಿದ್ದು, ಅದಕ್ಕೆ ಖುದ್ದಾಗಿ ಬೆಂಗಾಲ್ ಟೈಗರ್ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಸೇರುವ ಉದ್ದೇಶದಿಂದ ಬಿಸಿಸಿಐ ಅಧ್ಯಕ್ಷನಾಗಿಲ್ಲ: ಸ್ಪಷ್ಟನೆ ನೀಡಿದ ಗಂಗೂಲಿ!
ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವುದು ಬಹುತೇಕ ಖಚಿತವಾಗಿದ್ದು, ಇದೇ ವೇಳೆ ಅವರ ಮೇಲೆ ಕೇಳಿ ಬಂದಿದ್ದ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಮುಂಬರುವ ಪಶ್ಚಿಮ ಬಂಗಾಳ ಚುನಾವಣೆ ಗಮನದಲ್ಲಿಟ್ಟುಕೊಂಡ ಭಾರತೀಯ ಜನತಾ ಪಾರ್ಟಿ ಸೌರವ್ ಗಂಗೂಲಿಗೆ ಮಣೆ ಹಾಕಿದೆ ಎಂದು ತಿಳಿದು ಬಂದಿತ್ತು. ಜತೆಗೆ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್ ಶಾ ಸಹ ಅವರು ಬಿಜೆಪಿ ಬರುವುದಾದರೆ ಸ್ವಾಗತ ಎಂಬ ಹೇಳಿಕೆ ನೀಡಿದ್ದರು. ಈ ಎಲ್ಲ ಬೆಳವಣಿಗೆ ನೋಡಿದಾಗ ರಾಜಕೀಯ ಲೆಕ್ಕಾಚಾರದಿಂದಲೇ ಅವರನ್ನ ಬಿಸಿಸಿಐ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ ಎನ್ನಲಾಗಿತ್ತು.
ಸದ್ಯ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸೌರವ್ ಗಂಗೂಲಿ, ಇದೇ ಮೊದಲ ಸಲ ನಾನು ಅಮಿತ್ ಶಾ ಅವರನ್ನ ಭೇಟಿಯಾಗಿರುವೆ. ನಾನು ಬಿಸಿಸಿಐ ಬಿಟ್ಟು ಬೇರೆ ಯಾವುದೇ ವಿಷಯದ ಬಗ್ಗೆ ಮಾತುಕತೆ ನಡೆಸಿಲ್ಲ. ನಾನು ಅಧ್ಯಕ್ಷನಾಗಿ ಆಯ್ಕೆಯಾಗುತ್ತೇನೆ ಇಲ್ಲವೋ ಎಂಬ ಪ್ರಶ್ನೆ ಕೇಳಿದ್ದೇನೆ. ಆ ವೇಳೆ ಉತ್ತಮವಾಗಿ ಸೇವೆ ಸಲ್ಲಿಸುವುದಾದರೆ ನಿಮಗೆ ಈ ಹುದ್ದೆ ಸಿಗಲಿದೆ ಎಂಬ ಮಾತು ಅವರು ಹೇಳಿದ್ದಾರೆ. ಇದನ್ನ ಬಿಟ್ಟು ರಾಜಕೀಯ ಬಗ್ಗೆ ನಾನು ಚರ್ಚೆ ನಡೆಸಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.