ನವದೆಹಲಿ:ರಾಜಸ್ಥಾನ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣವಾಗುತ್ತಲೇ ಇದ್ದರೂ, ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸ ಜನಪಥದಲ್ಲಿ ಭಾನುವಾರ ಮೌನ ಆವರಿಸಿತ್ತು. ಈ ಬಗ್ಗೆ ಚರ್ಚಿಸಲು ಯಾವುದೇ ಹಿರಿಯ ಕಾಂಗ್ರೆಸ್ ಮುಖಂಡರು ಅಲ್ಲಿಗೆ ಆಗಮಿಸಿರಲಿಲ್ಲ.
ಪಕ್ಷದ ಮೂಲಗಳ ಪ್ರಕಾರ, ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಶನಿವಾರ ಸಂಜೆ ದೆಹಲಿಗೆ ಆಗಮಿಸಿ ಸೋನಿಯಾ ಗಾಂಧಿ ಅವರೊಂದಿಗೆ ಸಭೆ ನಡೆಸಲು ಕೋರಿದ್ದರು. ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರೊಂದಿಗಿನ ಬಿರುಕಿನಿಂದಾಗಿ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ.
ಪೈಲಟ್‌ನ ಕಡೆಯವರು ಎಂದು ಹೇಳಲಾದ ಕನಿಷ್ಠ 25 ಶಾಸಕರು ಎನ್‌ಸಿಆರ್-ದೆಹಲಿ ಪ್ರದೇಶದಲ್ಲಿ ವಿವಿಧ ಸ್ಥಳಗಳಲ್ಲಿ ತಂಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಅಶೋಕ್ ಗೆಹ್ಲೋಟ್ ತಮಗೆ 103 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ರಾಜ್ಯದ ಎರಡೂ ಗುಂಪಿನವರನ್ನು ಸಮಾಧಾನಪಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಾಜಸ್ಥಾನದ ರಾಜಕೀಯ ಗಲಾಟೆಯ ಮಧ್ಯೆ, ರಾಜಸ್ಥಾನದ ಸುಮಾರು 12 ಶಾಸಕರು ಗುರುಗ್ರಾಮ್ನ ಮಾನೇಸರ್ ಬಳಿ ಇರುವ ಐಟಿಸಿ ಗ್ರ್ಯಾಂಡ್ ಭಾರತ್ ಹೋಟೆಲ್ಗೆ ಶನಿವಾರ ಸಂಜೆ ಧಾವಿಸಿದ್ದರು.
ಬಿಜೆಪಿ ತನ್ನ ಶಾಸಕರಿಗೆ ಆಮಿಷವೊಡ್ಡುವ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಮತ್ತು ಅವರನ್ನು ಬೇಟೆಯಾಡಲು ಕೋಟ್ಯಂತರ ರೂಪಾಯಿಗಳನ್ನು ನೀಡುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶನಿವಾರ ಆರೋಪಿಸಿದ್ದರು.