ಮುಂಬೈ: ರಾತ್ರೋರಾತ್ರಿ ಬಿಜೆಪಿ ಬೆಂಬಲಿಸಿ ಶನಿವಾರ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಜಿತ್ ಪವಾರ್ ಪಕ್ಷದ ವಿರುದ್ಧವಾಗಿ ನಡೆದುಕೊಂಡು ಅಶಿಸ್ತಿನಿಂದ ವರ್ತಿಸಿದ್ದಾರೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಬೇಸರ ವ್ಯಕ್ತಪಡಿಸಿದರು.
ಶಿವಸೇನೆ ಹಾಗೂ ಎನ್‌ಸಿಪಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಜಿತ್ ಪವಾರ್ ಅವರ ನಿರ್ಧಾರ ಪಕ್ಷದ ರೇಖೆಗೆ ವಿರುದ್ಧವಾಗಿದೆ. ಅವರ ನಡೆಯಿಂದ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ನೋವಾಗಿದೆ. ಎನ್‌ಸಿಪಿ ಕಾರ್ಯಕರ್ತ, ಮುಖಂಡರಾಗಲೀ ಎನ್‌ಸಿಪಿ-ಬಿಜೆಪಿ ಸರ್ಕಾರದ ಪರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಒಂದು ವೇಳೆ ಎನ್‌ಸಿಪಿ ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿದರೆ, ಅವರೆಲ್ಲರೂ ಪಕ್ಷಾಂತರ ಕಾಯ್ದೆಯಡಿ ತಮ್ಮ ಸದಸ್ಯತ್ವ ಕಳೆದುಕೊಳ್ಳುತ್ತಾರೆ. ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಅವರಿಗೆ ಸಮಯ ಕೊಟ್ಟಿದ್ದಾರೆ. ಆದರೆ, ಸಾಬೀತುಪಡಿಸಲು ಬಿಜೆಪಿ ವಿಫಲವಾಗುತ್ತದೆ. ಏಕೆಂದರೆ ನಮ್ಮ ಶಾಸಕರು ನಮ್ಮನ್ನೇ ಬೆಂಬಲಿಸಲಿದ್ದಾರೆ. ಅದರ ನಂತರ ಮೊದಲೇ ನಿರ್ಧರಿಸಿದಂತೆ ನಮ್ಮ ಮೂರು ಪಕ್ಷಗಳು (‘ಕಾಂಗ್ರೆಸ್ (44), ಶಿವಸೇನೆ (56) ಮತ್ತು ಎನ್‌ಸಿಪಿ (55) ಸರ್ಕಾರ ರಚಿಸುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.