ಲಕ್ನೋ(ಉತ್ತರ ಪ್ರದೇಶ):ಮಹಿಳೆವೋರ್ವಳು ಆಸ್ಪತ್ರೆ ಎದುರೇ ಮಗುವಿಗೆ ಜನ್ಮ ನೀಡಿ, ಸುಮಾರು 15 ನಿಮಿಷಗಳ ಕಾಲ ಬೆತ್ತಲೆ ಮಲಗಿ ನರಳಾಡಿದರೂ ಸಹ ಯಾರೊಬ್ಬರು ಆಕೆಯ ಸಹಾಯಕ್ಕೆ ಬಂದಿಲ್ಲವೆಂಬ ಗಂಭೀರ ಆರೋಪ ಉತ್ತರ ಪ್ರದೇಶದ ಅಲಿಗಂಜ್ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ತಾಯಿ-ಮಗು ಅಸಹಾಯಕರಾಗಿ ಮಲಗಿದ್ದಾಗ ಆಸ್ಪತ್ರೆಯ ವೈದ್ಯರಾಗಲಿ, ದಾದಿಯರಾಗಲಿ ಸಹಾಯಹಸ್ತ ಚಾಚದಿರುವುದು ಮಾನವೀಯತೆಗೆ ಪ್ರಶ್ನಿಸುವಂತಹ ಪ್ರಕರಣವೊಂದಕ್ಕೆ ಸಾಕ್ಷಿಯಾಗಿದೆ ಈ ಆಸ್ಪತ್ರೆ. ಅಲ್ಲಿದ್ದವರು ಸಹ ಮೂಕಪ್ರೇಕ್ಷಕರಾಗಿ ನಿಂತಿದ್ದು, ತಡವಾಗಿ ಬಂದ ಮಹಿಳಾ ಆರೋಗ್ಯ ಕಾರ್ಯಕರ್ತೆವೋರ್ವಳು ಸಹ ನಿರ್ಲಕ್ಷ್ಯ ತೋರಿದ್ದಾಳೆ ಎನ್ನಲಾಗ್ತಿದೆ.
ಆಸ್ಪತ್ರೆ ಎದುರೇ ಮಗುವಿಗೆ ಜನ್ಮ... ತಾಯಿಯ ಗೋಳು ಕೇಳಲಿಲ್ವಾ ಆಸ್ಪತ್ರೆ ಸಿಬ್ಬಂದಿ?! ಗುರುವಾರ ಮಧ್ಯಾಹ್ನ ಗರ್ಭಿಣಿ ತನ್ನ ಕುಟುಂಬಸ್ಥರೊಂದಿಗೆ ಅಲಿಗಂಜ್ನಲ್ಲಿರುವ ಆಸ್ಪತ್ರೆಗೆ ತೆರಳಿದ್ದಳು. ಆಕೆ ಹೆರಿಗೆ ನೋವಿನಿಂದ ನರಳುತ್ತಿದ್ದರೂ ಸಹ ಯಾರೂ ಆಕೆಯ ಸಹಾಯಕ್ಕೆ ಮುಂದಾಗಿಲ್ಲ. ಆಕೆ ಆಸ್ಪತ್ರೆ ಆವರಣದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಲೇಬರ್ ರೂಮ್ ಅಲ್ಲೇ ಇದ್ದರೂ ಸಹ ವ್ಯರ್ಥ ಎನ್ನುವ ಸನ್ನಿವೇಶ ನಿರ್ಮಾಣವಾಗಿತ್ತು.
ಗರ್ಭಿಣಿ ಕುಟುಂಬಸ್ಥರು ಆಸ್ಪತ್ರೆ ಸಿಬ್ಬಂದಿಗೆ ಕರೆಮಾಡಿದರೂ ಸಹ ಯಾರೊಬ್ಬರು ಕರೆ ಸ್ವೀಕರಿಸಿಲ್ಲ. ಅವರು, ಕೆಲವು ನಿರ್ಬಂಧಗಳು ನಮ್ಮ ಮೇಲಿವೆ ಎಂದು ವಾದಿಸಿದರು. ಹೆರಿಗೆ ಸಮಯದಲ್ಲಿ ಮಹಿಳೆಯನ್ನು ಹೇಗೆ ರಕ್ಷಿಸಬೇಕು ಎಂಬುದರ ಕುರಿತು ಪುರುಷ ಆರೋಗ್ಯ ಕಾರ್ಯಕರ್ತರಿಗೆ ಕೆಲವು ಗೊಂದಲಗಳು, ಸಮಸ್ಯೆಗಳಿವೆ ಎಂದು ವಾದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ ಡಾ.ಅಜಯ್ ಅಗರ್‌ವಾಲ್ ಈ ಕುರಿತು ಮಾತನಾಡಿ, ಆ್ಯಂಬ್ಯುಲೆನ್ಸ್‌ನಿಂದ ಇಳಿದ ಕೂಡಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ನಿರ್ಲಕ್ಷ್ಯ ಆರೋಪವನ್ನು ತಳ್ಳಿಹಾಕಿದ್ದಾರೆ. ಅಂತಹ ಸಂದರ್ಭಗಳಲ್ಲಿ, ಕೆಲವೊಮ್ಮೆ ಸಮಸ್ಯೆಗಳು ಆಗುತ್ತವೆ ಎಂದು ಸಮಸ್ಯೆಗೆ ಅವರು ಸಮರ್ಥನೆ ನೀಡಿದ್ದಾರೆ.