ಮುಂಬೈ: ಅಂಧೇರಿಯ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುವ ಪ್ಲಾಸ್ಮಾ ಥೆರಪಿ ಘಟಕವನ್ನು ಸಚಿನ್ ತೆಂಡೂಲ್ಕರ್ ಉದ್ಘಾಟಿಸಿದರು. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ (ಬಿಎಂಸಿ) ಪ್ರಾರಂಭಿಸಿದ ಈ ಪ್ಲಾಸ್ಮಾ ಥೆರಪಿ ಘಟಕವು ಕೊರೊನಾ ವೈರಸ್ ವಿರುದ್ಧದ ಯುದ್ಧಕ್ಕೆ ಶಕ್ತಿ ತುಂಬಲಿದೆ.
"ನಾವು ಕೋವಿಡ್-19 ಸಾಂಕ್ರಾಮಿಕ ರೂಪದಲ್ಲಿ ನಮ್ಮ ಆರೋಗ್ಯಕ್ಕೆ ಸವಾಲನ್ನು ಎದುರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ, ಪೊಲೀಸ್, ಪುರಸಭೆ ಮತ್ತು ಸರ್ಕಾರಿ ಸಿಬ್ಬಂದಿಗಳು ಪರಿಣಾಮಕಾರಿ ಆರೋಗ್ಯ ಸೇವೆ ನೀಡಲು ದಣಿವರಿಯದೇ ಕೆಲಸ ಮಾಡುತ್ತಿದ್ದಾರೆ" ಎಂದು ಸಚಿನ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
"ಪರಿಣಾಮಕಾರಿ ಲಸಿಕೆ ಮತ್ತು ಚಿಕಿತ್ಸೆಯನ್ನು ಕಂಡುಹಿಡಿಯಲು ಜಗತ್ತಿನಾದ್ಯಂತ ಸಂಶೋಧಕರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಪ್ಲಾಸ್ಮಾ ಚಿಕಿತ್ಸೆಯು ತೀವ್ರವಾಗಿ ಅನಾರೋಗ್ಯ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಆಯ್ಕೆಯಾಗಿ ಹೊರಹೊಮ್ಮಿದೆ. ಜೀವ ಉಳಿಸುವ ಈ ಸೇವೆಯನ್ನು ಪ್ರಾರಂಭಿಸಿದ ಬಿಎಂಸಿಯನ್ನು ನಾನು ಅಭಿನಂದಿಸುತ್ತೇನೆ" ಎಂದು ಸಚಿನ್ ಹೇಳಿದ್ದಾರೆ.
"ಕೋವಿಡ್-19ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡವರು ಮುಂದೆ ಬಂದು ಪ್ಲಾಸ್ಮಾ ಚಿಕಿತ್ಸೆಗಾಗಿ ದಾನ ಮಾಡಿ ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳ ಜೀವ ಉಳಿಸಲು ಸಹಾಯ ಮಾಡಲು ನಾನು ಮನವಿ ಮಾಡುತ್ತೇನೆ" ಎಂದು ಅವರು ಇದೇ ವೇಳೆ ಜನರಿಗೆ ಮನವಿ ಮಾಡಿದ್ದಾರೆ.
ಚೇತರಿಸಿಕೊಂಡ ರೋಗಿಗಳಿಂದ ದಾನ ಮಾಡಿದ ರಕ್ತ ಮತ್ತು ಪ್ಲಾಸ್ಮಾವನ್ನು ಬಳಸಿಕೊಂಡು ಪ್ಲಾಸ್ಮಾ ಥೆರಪಿ ಘಟಕವು ಕೋವಿಡ್-19 ರೋಗಿಗಳಿಗೆ ಅನುಕೂಲಕರ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಲಿದೆ.