ಕರ್ನಾಟಕ

karnataka

ETV Bharat / bharat

ಈಕೆ ರೋಬೋ ಪೊಲೀಸಮ್ಮ, ನೀವು ಕಂಪ್ಲೇಂಟ್​​​​ ಇಲ್ಲೇ ಕೊಡ್ಬೇಕು!

ರೋಬೋ ಪ್ರಪಂಚ ಸೃಷ್ಟಿಯಾಗುತ್ತಿದೆ. ರೋಬೋಗಳ ಸಹಾಯವಿಲ್ಲದೇ ನಿತ್ಯ ಜೀವನ ಸರಾಗವಾಗಿ ನಡೆಯುವುದೇ ಇಲ್ಲ ಅನ್ನೋ ಹಂತಕ್ಕೆ ತಲುಪಿಬಿಟ್ಟಿದ್ದಾನೆ ಮನುಷ್ಯ. ಬೃಹತ್​ ಕೈಗಾರಿಕೆಗಳಿಂದ ಹಿಡಿದು ಸಣ್ಣಪುಟ್ಟ ಹೊಟೇಲ್​ಗಳವರೆಗೆ ಬಳಸಲಾಗುತ್ತಿದ್ದ ರೋಬೋಟ್‌ಗಳು ಪೊಲೀಸ್​ ಠಾಣಾ ಸಿಬ್ಬಂದಿಯಾಗಿಯೂ ಕೆಲಸ ಮಾಡುತ್ತಿವೆ.

ಇಲ್ಲೊಬ್ಬ ರೋಬೋ ಪೊಲೀಸಮ್ಮ

By

Published : Nov 20, 2019, 10:05 AM IST

Updated : Nov 20, 2019, 12:29 PM IST

ವಿಶಾಖಪಟ್ಟಣ(ಆಂಧ್ರಪ್ರದೇಶ): ಆಂಧ್ರಪ್ರದೇಶದ ಬಂದರು ನಗರ ವಿಶಾಖಪಟ್ಟಣದ ಪೊಲೀಸ್​ ಠಾಣೆಯೊಂದಕ್ಕೆ ಹೊಸ ಮಹಿಳಾ ಅಧಿಕಾರಿ ನೇಮಕವಾಗಿದ್ದಾರೆ. ಅಲ್ಲಿಗೆ ಸಮಸ್ಯೆ ಹೇಳಿಕೊಂಡು ಬರುವವರ ಕಣ್ಣೆಲ್ಲಾ ಆಕೆಯ ಮೇಲಿದೆ. ಯಾವುದೇ ದೂರನ್ನು ಇಲ್ಲಿ ಆಕೆಯ ಕೈಗೆ ನೀಡಬೇಕು. ನೀವು ನೀಡಿದ ದೂರನ್ನು ಮೇಲಧಿಕಾರಿಗಳಿಗೆ ತಲುಪಿಸುವ ಜವಾಬ್ದಾರಿ ಮಾತ್ರ ಆಕೆಯದ್ದು. ಬೇರೇನೂ ಕೆಲಸ ಇರೋದಿಲ್ಲ. ಆಕೆಯ ಹೆಸರು ಮಿಸ್​​​ ಸಿಬಿರಾ.

ಸಿಬಿರಾ (ಸೈಬರ್​ ಇಂಟರಾಕ್ಟೀವ್​ ರೋಬೋಟಿಕ್​ ಏಜೆಂಟ್) ಹೆಸರು ಮಾತ್ರ ವಿಶೇಷವಲ್ಲ. ಆ ಮಹಿಳಾ ಅಧಿಕಾರಿಯೂ ಕೂಡಾ ವಿಚಿತ್ರ. ಏಕೆಂದರೆ ಅದೊಂದು ರೋಬೋ ಅಧಿಕಾರಿ. ಹೌದು, ವಿಶಾಖಪಟ್ಟಣದ ಮಹಾರಾಣಿಪೇಟ ಪೊಲೀಸ್​ ಠಾಣೆಯಲ್ಲಿ ಇಂತಹದೊಂದು ರೋಬೋಟನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರಿಂದ ಬಂದ ದೂರುಗಳನ್ನು ಮೇಲಧಿಕಾರಿಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಈ ರೋಬೋ ಮಾಡುತ್ತದೆ.

ಸಿಬಿರಾ ಎನ್ನುವ ರೋಬೋ ಕೌಪ್ಲರ್ ಪ್ರೈವೇಟ್​ ಲಿಮಿಟೆಡ್ ಎಂಬ ಸಾಫ್ಟ್​ವೇರ್​ ಕಂಪನಿಯೊಂದು ಅಭಿವೃದ್ಧಿಪಡಿಸಿದೆ. ದಿನಕ್ಕೆ ನೂರಾರು ದೂರುಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇರುವ ಸಿಬಿರಾ ವಿಶಾಖ ಪೊಲೀಸ್​ ಆಯುಕ್ತಾಲಯದಲ್ಲಿ ವಿಶೇಷ ಆಕರ್ಷಣೆಯಾಗಿದೆ. ಪ್ರಯೋಗಾತ್ಮಕವಾಗಿ ಠಾಣೆಗೆ ಪ್ರವೇಶ ಪಡೆದಿರುವ ಈ ರೋಬೋಟ್​​ ಎಲ್ಲಾ ಪೊಲೀಸ್​ ಸಿಬ್ಬಂದಿಯೊಂದಿಗೆ ನಿಧಾನಕ್ಕೆ ಬೆರೆತುಕೊಳ್ಳುತ್ತಿದೆ.

ಇಲ್ಲೊಬ್ಬ ರೋಬೋ ಪೊಲೀಸಮ್ಮ

ಪೊಲೀಸ್​ ಠಾಣೆ ಮತ್ತಷ್ಟು ದಕ್ಷವಾಗಿ ಕಾರ್ಯನಿರ್ವಹಣೆ ಮಾಡುವುದಕ್ಕೆ ಕೂಡಾ ಈ ರೋಬೋ ಸಹಕರಿಸಲಿದೆ. ಸಾರ್ವಜನಿಕರಿಂದ ತೆಗೆದುಕೊಂಡ ದೂರುಗಳು ಇತ್ಯರ್ಥವಾಗದಿದ್ದರೆ ಅಲಾರಂ ಮೂಲಕ ಮೇಲಧಿಕಾರಿಗಳಿಗೆ ಸೂಚಿಸುತ್ತದೆ. ಜೊತೆಗೆ ಠಾಣೆಯಲ್ಲಿ ದೂರು ಇತ್ಯರ್ಥಕ್ಕೆ ಸಾಧ್ಯವಾಗದಿದ್ದರೆ ಆ ದೂರನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಕಚೇರಿಗೆ ವರ್ಗಾಯಿಸಲೂ ಕೂಡಾ ಈ ರೋಬೋಟ್​ ಶಕ್ತವಾಗಿದೆ ಎನ್ನುತ್ತಾರೆ ರೋಬೋ ಅಭಿವೃದ್ಧಿ ಪಡಿಸಿದ ಸಂಸ್ಥೆಯ ಸದಸ್ಯ ಡಿ.ಕೆ.ಐರಾವತ್​​.

ಆಧುನಿಕತೆಯ ಸುಳಿಗೆ ಸಿಕ್ಕು ವೇಗವಾಗಿ ಮುಂದುವರೆಯುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲಾ ಕ್ಷೇತ್ರಗಳೂ ನೂತನ ತಂತ್ರಜ್ಞಾನಕ್ಕೆ ಮೊರೆಹೋಗುತ್ತಿವೆ. ಈ ವೇಳೆ ರೋಬೋಗಳೂ ಕೂಡಾ ತಮ್ಮನ್ನ ವಿಸ್ತರಿಸಿಕೊಳ್ಳುತ್ತಿವೆ. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಎಷ್ಟು ಮುಖ್ಯವೋ ಅಲ್ಲಿ ಮಾನವ ತಂತ್ರಜ್ಞಾನಕ್ಕೆ ದಾಸನಾಗದೆ ಇರುವಂತೆ ಎಚ್ಚರಿಕೆ ವಹಿಸುವುದು ಕೂಡಾ ಅಷ್ಟೆ ಮುಖ್ಯ. ಯಂತ್ರ ಮಾನವ ಪೊಲೀಸರಿಂದ ಅಲ್ಲಿನ ಮಾನವ ಪೊಲೀಸರು ಉದ್ಯೋಗ ಕಳೆದುಕೊಳ್ಳದಂತೆ ನೋಡಿಕೊಳ್ಳುವುದೂ ಕೂಡಾ ತುರ್ತು ಆಗಬೇಕಾದ ಕೆಲಸ.

Last Updated : Nov 20, 2019, 12:29 PM IST

ABOUT THE AUTHOR

...view details