'ರಾಜಕಾರಣ ಎಂಬುದು ದುಷ್ಟರ ಮತ್ತು ಪುಂಡು-ಪೋಕರಿಗಳ ಕೊನೆಯ ಆಶ್ರಯತಾಣ ಆಗಿದೆ' ಎಂಬುದು ಚಿಂತಕ ಜಾರ್ಜ್ ಬರ್ನಾರ್ಡ್ ಶಾ ಅವರ ಮಾತು. ಪ್ರಸ್ತುತ ರಾಜಕೀಯ ಸನ್ನಿವೇಶ ಗಮನಿಸಿದರೆ ಈ ಮಾತು ಸರಿ ಅನ್ನಿಸುತ್ತದೆ!.
ದೇಶದ ಪ್ರಮುಖ ರಾಜಕೀಯ ನಿರ್ಧಾರಗಳನ್ನು ರಾಜಕಾರಣಿಗಳ ರೆಸಾರ್ಟ್ ತಂತ್ರಗಾರಿಕೆ ಪ್ರಭಾವಿಸಿದ ಸಂದರ್ಭ ಎದುರಾದಾಗಲೆಲ್ಲಾ ಈ ಮಾತಿನ ಸತ್ಯ ಮತ್ತೆ ಮತ್ತೆ ನಮ್ಮ ಅರಿವಿಗೆ ಬರುತ್ತದೆ. ಎಲ್ಲಾ ರಾಜಕೀಯ ಪಕ್ಷಗಳು ಭಾರತದ ಸಂವಿಧಾನವನ್ನು ಪಾಲನೆ ಮಾಡಬೇಕು ಎಂದು ‘1951ರ ಜನಪ್ರತಿನಿಧಿ ಕಾಯ್ದೆಯ 29 ನೇ ವಿಧಿ’ಹೇಳುತ್ತದೆ. ಸಾರ್ವಜನಿಕ ಕ್ಷೇತ್ರದಲ್ಲಿ ಬಹುತೇಕ ಸ್ಥಾನಗಳನ್ನು ಗೆದ್ದಿರುವ ರಾಜಕೀಯ ಪಕ್ಷಗಳು ಸಾಂವಿಧಾನಿಕವಾಗಿ ಆಳ್ವಿಕೆ ಮಾಡಬೇಕು ಎಂದು ಪ್ರತಿಜ್ಞೆ ಮಾಡಬೇಕು. ರಾಜ್ಯಸಭೆ ಚುನಾವಣೆ ಎದುರಾಗುತ್ತಿರುವಾಗ ನಿಷ್ಠೆ ಮತ್ತು ಸಾಂವಿಧಾನಿಕತೆ ಎರಡೂ ಕುದುರೆ ವ್ಯಾಪಾರದ ಅಡಕತ್ತರಿಗೆ ಸಿಕ್ಕಂತಾಗಿದೆ. ಈಗ ಪ್ರಜಾಪ್ರಭುತ್ವ ಎಂಬುದು ಅಕ್ಷರಶಃ ಮಾರುಕಟ್ಟೆಯಲ್ಲಿ ಬಿಕರಿಯಾಗುವ ವಸ್ತುವಾಗಿ ಮಾರ್ಪಟ್ಟಿದೆ. ಗುಜರಾತ್ ಮತ್ತು ರಾಜಸ್ತಾನದ ಇತ್ತೀಚಿನ ರಾಜಕೀಯ ಸನ್ನಿವೇಶ ದೊಡ್ಡ ಮಟ್ಟದಲ್ಲಿ ಅದನ್ನು ಮತ್ತೊಮ್ಮೆ ಸಾರಿ ಹೇಳುತ್ತಿದೆ!
"ನಾವು ಕೇವಲ ಅಧಿಕಾರದಲ್ಲಿ ಇರುವ ಸಲುವಾಗಿ ಭ್ರಷ್ಟಾಚಾರ ಇಲ್ಲವೇ ಅನೈತಿಕ ಕೆಲಸಗಳಿಗೆ ಮಣೆ ಹಾಕಬಾರದು. ಅಧಿಕಾರ ಗಳಿಸುವ ಸಲುವಾಗಿ ನಮ್ಮ ಆತ್ಮಗಳನ್ನು ಮಾರಾಟ ಮಾಡುವ ಅಥವಾ ಅವುಗಳನ್ನು ಅಡ ಇಡುವ ಉದ್ದೇಶ ನಮ್ಮದಾಗಬಾರದು" - ಸುಮಾರು ಇಪ್ಪತ್ನಾಲ್ಕು ವರ್ಷಗಳ ಹಿಂದೆ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ಸಂಸತ್ತಿನಲ್ಲಿ ಮಾಡಿದ ಐತಿಹಾಸಿಕ ಭಾಷಣದಲ್ಲಿ ಆಡಿದ ಮಾತುಗಳು ಇವು. "ನಾವು ದಶಕಗಳಿಂದ ರಾಜಕೀಯದಲ್ಲಿ ಪ್ರಾಮಾಣಿಕ ನಡೆ ಅನುಸರಿಸುತ್ತಿದ್ದರೂ, ನಮ್ಮ ವಿರೋಧಿಗಳು ಈಗಲೂ ಕುತಂತ್ರದ ಆಟ ಆಡಿದರೆ ನಾವು ಏನು ತಾನೇ ಮಾಡಲು ಸಾಧ್ಯ?" ಹೀಗೆ ಭಾವುಕರಾಗಿ ವಾಜಪೇಯಿ ಕೆಲ ಸಂದರ್ಭಗಳಲ್ಲಿ ಹೇಳಿದ್ದರು. ಕಮಲಪಡೆಯನ್ನು ವಿಶಿಷ್ಟ ಪಕ್ಷವಾಗಿ ರೂಪಿಸಲು ಅನೇಕ ಬಗೆಯ ಆದರ್ಶಗಳನ್ನು ಹೊಸೆದ ವಾಜಪೇಯಿ ಮತ್ತು ಅಡ್ವಾಣಿ ಅವರ ಶ್ರಮ ವರ್ಣನೆಗೆ ನಿಲುಕದ್ದು. ಪಕ್ಷದ ನಾಯಕತ್ವ ಮುಂದಿನ ತಲೆಮಾರಿಗೆ ಹಸ್ತಾಂತರ ಆಗಲು ಪ್ರಾರಂಭ ಆಗುತ್ತಿದ್ದಂತೆ, ರಾಜಕೀಯ ವಲಯದಲ್ಲಿ ‘ಹೊಂದಾಣಿಕೆಯ ರಾಜಕೀಯ ತಂತ್ರಗಳಿಗೆ’ ಆದ್ಯತೆ ದೊರೆಯಲು ಶುರು ಆಯಿತು. ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಪಡೆದ ಆಧಾರದ ಮೇಲೆ ವಿಶ್ವದ ಅತಿದೊಡ್ಡ ಪಕ್ಷ ಎನಿಸಿರುವ ಬಿಜೆಪಿ ಸುಮಾರು 12 ರಾಜ್ಯಗಳಲ್ಲಿ ನೇರವಾಗಿ ಅಧಿಕಾರ ನಡೆಸುತ್ತಿರುವ ಪಕ್ಷವಾಗಿ ಹೊರಹೊಮ್ಮಿದೆ ಮತ್ತು ಬಲವಾದ ಮಿತ್ರಕೂಟಗಳ ನೆರವಿನಿಂದ ಇನ್ನೂ 6 ರಾಜ್ಯಗಳಲ್ಲಿ ಅಧಿಕಾರದ ಅನುಭವಿಸುತ್ತ ಇದೆ. ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದೆ ಮತ್ತು ಬೇರೆ ಎರಡು ಯುಪಿಎ ಮಿತ್ರ ಪಕ್ಷಗಳು ಉಳಿದ 2 ರಾಜ್ಯಗಳಲ್ಲಿ ಅಧಿಕಾರ ಚಲಾಯಿಸುತ್ತಿವೆ. ಎಐಎಡಿಎಂಕೆ, ಟಿಆರ್ಎಸ್, ವೈಎಸ್ಆರ್ಸಿಪಿ, ಬಿಜೆಡಿ, ತೃಣಮೂಲ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ (ಎಡ) ಪಕ್ಷಗಳು ಆರು ರಾಜ್ಯಗಳಲ್ಲಿ ಪ್ರವರ್ಧಮಾನಕ್ಕೆ ಬಂದಿವೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಸಮರ್ಪಕ ವಿರೋಧ ಇಲ್ಲ ಎಂಬ ಕೊರತೆ ಪ್ರಜಾಪ್ರಭುತ್ವದ ಬೇರುಗಳನ್ನು ಅಲುಗಾಡಿಸುತ್ತಿದೆ. ಆರೋಪಿಯನ್ನು ದೂಷಿಸದೆ, ದೊಡ್ಡ ಗೆರೆಯನ್ನು ಸಣ್ಣ ಗೆರೆಯಾಗಿ, ಸಣ್ಣ ಗೆರೆಯನ್ನು ದೊಡ್ಡದಾಗಿ ಬಿಂಬಿಸಿ ಬಹುಮತದ ಭ್ರಮೆ ಹುಟ್ಟು ಹಾಕುವ ಕಪಟ ತಂತ್ರಗಾರಿಕೆ ಈ ದಿನಗಳಲ್ಲಿ ಹೆಚ್ಚುತ್ತಿದೆ. ಹಿಂದೆ ಕರ್ನಾಟಕ ರಾಜ್ಯದಲ್ಲಿ ಆದಂತೆ ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಕಂಡು ಬಂದಂತೆ ಸಾರ್ವಜನಿಕ ಅಭಿಪ್ರಾಯದ ಮೇಲೆ ಕರಾಳ ಪರಿಣಾಮ ಬೀರುವ ಈ ಪ್ರವೃತ್ತಿ ಗುಜರಾತ್ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಈಗ ಕಂಡು ಬರುತ್ತದೆ!
ರಾಜ್ಯಸಭೆಯ ಕೆಲ ಸ್ಥಾನಗಳಿಗಾಗಿ ಅಖಾಡ ನಿರ್ಮಾಣ ಆಗಿದ್ದು, ರಾಜ್ಯಸಭಾ ಚುನಾವಣೆಯಲ್ಲಿ ಖುದ್ದು ಶಾಸಕರೇ ಮತದಾರರು. ಪ್ರತಿಯೊಂದು ಪಕ್ಷವೂ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ ಎಂಬುದರ ಆಧಾರದಲ್ಲಿ ಗೆಲುವನ್ನು ಸುಲಭವಾಗಿ ಲೆಕ್ಕಾಚಾರ ಹಾಕಬಹುದಾಗಿದೆ. 2020 ರ ಮೇ 19 ರಂದು 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಆದರೂ, 2020 ರ ಮಾರ್ಚ್ ತಿಂಗಳಲ್ಲಿ ಕೋವಿಡ್-19 ಸಾಂಕ್ರಾಮಿಕದ ಪರಿಣಾಮದಿಂದಾಗಿ ಈ 24 ಸ್ಥಾನಗಳಲ್ಲಿ 18 ಸ್ಥಾನಗಳ ಚುನಾವಣೆಯನ್ನು ಮುಂದೂಡಲಾಯಿತು. ಮುಖ್ಯಮಂತ್ರಿ ಹುದ್ದೆ, ಪಿಸಿಸಿ ಸ್ಥಾನ ಇರಲಿ, ಕನಿಷ್ಠ ಪಕ್ಷ ರಾಜ್ಯಸಭಾ ಸ್ಥಾನ ಪಡೆಯದ ನೋವಿನಿಂದ ಬಳಲಿದ ಜ್ಯೋತಿರಾದಿತ್ಯ ಸಿಂಧಿಯಾ ಕಿಲಾಡಿತನ ಮೆರೆದರು. ತಮ್ಮ ಮೂಲಪಕ್ಷವಾದ ಕಾಂಗ್ರೆಸ್ನಿಂದ ಭಾರತೀಯ ಜನತಾ ಪಕ್ಷಕ್ಕೆ ನಿಷ್ಠೆ ಬದಲಿಸಿದರು. ಅವರ ಈ ಜಿಗಿತ ಶಿವರಾಜ್ ಸಿಂಗ್ ಅವರು ಮಧ್ಯಪ್ರದೇಶ ರಾಜ್ಯದಲ್ಲಿ ತಮ್ಮ ಸರ್ಕಾರ ಸ್ಥಾಪಿಸಲು ಕಾರಣ ಆಯಿತು. ಗುಜರಾತಿನಲ್ಲಿ ಕೂಡ ಇದೇ ಪರಿಸ್ಥಿತಿ ಏರ್ಪಟ್ಟಿದ್ದು, ಅಧಿಕಾರ ಹಿಡಿಯಬೇಕಿದ್ದ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ದುರ್ಬಲಗೊಳಿಸಲು ಬಿಜೆಪಿ ಅದೇ ತಂತ್ರ ಬಳಸುತ್ತಿದೆ. ಕಾಂಗ್ರೆಸ್ ಪಕ್ಷದ ಶಾಸಕರನ್ನು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸುವ ಮೂಲಕ, ಅದಕ್ಕೆ ದೊರೆತಿದ್ದ ಬಹುಮತವನ್ನು ದುರ್ಬಲಗೊಳಿಸುತ್ತಿದೆ. 2017ರ ಚುನಾವಣೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದಿದ್ದರೂ ಸಹ ಕಾಲಕಾಲಕ್ಕೆ ರಾಜೀನಾಮೆ ಕೊಡಿಸಿದ ಪರಿಣಾಮವಾಗಿ ಇಂದು ಅದರ ಸಂಖ್ಯೆ 65ಕ್ಕೆ ಕುಸಿದಿದೆ. 68 ಸ್ಥಾನಗಳಿಂದ ಮೊದಲ ಆದ್ಯತೆಯ ಮತಗಳನ್ನು ಕಾಂಗ್ರೆಸ್ ನಿರೀಕ್ಷಿಸಿತ್ತು. ಆದರೆ ಬಿಜೆಪಿ ಇತ್ತೀಚಿಗೆ ನಡೆಸಿದ ರಾಜೀನಾಮೆ ಪ್ರಹಸನದಿಂದಾಗಿ ಕಾಂಗ್ರೆಸ್ ರಾಜ್ಯಸಭೆಗೆ ಮೊದಲ ಎರಡು ಸ್ಥಾನಗಳನ್ನು ಪಡೆಯುವ ಸಾಧ್ಯತೆ ಕ್ಷೀಣಿಸಿದೆ. ಪಕ್ಷದ ಇತರ ಶಾಸಕರನ್ನು ಪ್ರಲೋಭನೆಗೆ ಒಡ್ಡಿ ಮತ್ತಷ್ಟು ರಾಜಕೀಯ ಜಿಗಿತ ಆಗುವುದನ್ನು ತಪ್ಪಿಸಲು ಕಾಂಗ್ರೆಸ್ ಯೋಜಿಸಿದ್ದು, ತನ್ನ ಶಾಸಕರನ್ನು ರಾಜಸ್ತಾನದ ರೆಸಾರ್ಟ್‌ಗೆ ಸ್ಥಳಾಂತರ ಮಾಡಿದೆ. ಹೀಗೆ ಕಾಂಗ್ರೆಸ್ ಮನುಷ್ಯರು ಇರಿಸುತ್ತಿರುವ ರಾಜಕೀಯ ತಂತ್ರಗಳು ಕುತಂತ್ರ ಮತ್ತು ತಮಾಷೆಯಿಂದ ಕೂಡಿವೆ ಎಂದು ತೋರುತ್ತದೆ. ಪ್ರಲೋಭನೆಯಿಂದ ತಪ್ಪಿಸಲು ಶಾಸಕರನ್ನು ರಾಜಸ್ತಾನಕ್ಕೆ ಸ್ಥಳಾಂತರಿಸಿದರೆ ಅಲ್ಲಿನ ಕಾಂಗ್ರೆಸ್ ಸರ್ಕಾರದ ಬೇಗುದಿ ಕೂಡ ಹೆಚ್ಚಲಿದೆ. ಬಿಜೆಪಿ ತನ್ನ ಚುನಾವಣಾ ಪ್ರಚಾರದಲ್ಲಿ ‘ಕಾಂಗ್ರೆಸ್ ಮುಕ್ತ ಭಾರತ್’ ಗುರಿ ಹೊಂದಿದೆ ಎಂದಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಈ ಹಿಂದೆ ತನ್ನ ಆಡಳಿತಾವಧಿಯಲ್ಲಿ ಪಾಲಿಸಿದ್ದ ಭ್ರಷ್ಟ ಆಡಳಿತಾತ್ಮಕ ನಡೆಗಳನ್ನೇ ಅನುಸರಿಸಿ ಕಾಂಗ್ರೆಸ್ ನಿರ್ಮೂಲನೆಗೆ ಅದು ಹೊರಟಿದೆ. ಏನೇ ಆಗಲಿ ನಾಗರಿಕರು/ಮತದಾರರು ಮತ್ತೆ ಅದೇ ಪಕ್ಷದಿಂದ ಆಳ್ವಿಕೆ ನಡೆಸಲಿ ಎಂದು ಜನಪ್ರತಿನಿಧಿಗಳನ್ನು ಆರಿಸಿದ್ದರೆ, ಅಂತಹ ರಾಜ್ಯಗಳಲ್ಲಿ ಎದುರಾಳಿ ಶಾಸಕರಿಗೆ ಆಮಿಷ ಒಡ್ಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಉರುಳಿಸುವುದು ಎಷ್ಟು ಸರಿಯಾದ ಕೆಲಸ. ಅಂತಹ ರಾಜ್ಯಗಳಲ್ಲಿ ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಇದು ಮೊಟಕುಗೊಳಿಸಿದಂತೆ ಆಗುವುದಿಲ್ಲವೇ?
ಚುನಾವಣೆಯ ವಿಧಾನ ಏನೇ ಇರಲಿ. ಪಕ್ಷದ ಪ್ರತಿಯೊಬ್ಬ ಸದಸ್ಯರು ಪಕ್ಷದ ಹಿತಾಸಕ್ತಿಗಳಿಗೆ ಭಂಗ ತರುವಲ್ಲಿ ಮಗ್ನರಾಗಿದ್ದಾರೆ. ವಿಶೇಷವಾಗಿ ನಮ್ಮ ರಾಷ್ಟ್ರದಲ್ಲಿ ಕಳೆದ ಮೂರು ತಲೆಮಾರುಗಳಿಂದ ಪಕ್ಷದ ಆದೇಶಕ್ಕೆ ಕಿವಿಗೊಡದೆ ಅಡ್ಡ-ಮತದಾನಕ್ಕೆ ಮುಂದಾಗುವ ತಂತ್ರ ಹೊಸತಲ್ಲ. ಮತ್ತು ಇದು ಕೆಟ್ಟ ರೂಢಿಯಾಗಿಬಿಟ್ಟಿದೆ. 1988ರಲ್ಲಿ ಒಂದು ವದಂತಿ ಹರಡಿತ್ತು ಮತ್ತು ಆಗಿನ ಪ್ರತಿಪಕ್ಷದ ನಾಯಕರೊಬ್ಬರು ಆರೋಪಿಸಿದಂತೆ ಜನತಾ ಪಕ್ಷದ ನಾಯಕರು ತಮ್ಮ ಪಕ್ಷದ ಇಬ್ಬರು ಸದಸ್ಯರಿಗೆ ರೂ 75,000ದ ಆಮಿಷ ಒಡ್ಡಿದ್ದರು. ನಂತರ, ಆರೋಪಕ್ಕೆ ತಕ್ಕಂತೆ ರೂ. 1,50,000 ಅನ್ನು ಸರ್ಕಾರಿ ನಿಧಿಗೆ ಜಮಾ ಮಾಡಬೇಕೆಂದು ಸ್ಪೀಕರ್ ಸೂಚಿಸಿದ್ದರು. 1992 ರ ಜೂನ್ ತಿಂಗಳಲ್ಲಿ, ಬಿಹಾರ ರಾಜ್ಯಸಭಾ ಚುನಾವಣೆಯ ವೇಳೆ, ಭಾರಿ ಪ್ರಮಾಣದಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ವಿಚಾರಣಾ ತಂಡ ಬಹಿರಂಗಪಡಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಅಂದಿನ ಚುನಾವಣಾ ಆಯೋಗವು ಚುನಾವಣೆಯನ್ನು ರದ್ದುಗೊಳಿಸುವ ಮೂಲಕ ತಕ್ಷಣ ಪ್ರತಿಕ್ರಿಯಿಸಿತ್ತು. ರಾಜ್ಯಸಭಾ ಸ್ಥಾನವೊಂದಕ್ಕೆ ಸುಮಾರು 100 ಕೋಟಿ ವೆಚ್ಚವಾಗುತ್ತಿದೆ ಎಂದು ಸಂಸದರೊಬ್ಬರು ತಪ್ಪೊಪ್ಪಿಕೊಂಡಿರುವುದು ರಾಷ್ಟ್ರ ರಾಜಕಾರಣದ ಸನ್ನಿವೇಶದಲ್ಲಿ ರಾಜಕೀಯ ವಿಷವರ್ತುಲ ಹೇಗಿದೆ ಎಂಬುದನ್ನು ಬಹಿರಂಗಪಡಿಸುತ್ತದೆ. ವಿಪರ್ಯಾಸ ಎಂದರೆ, ಅಡ್ಡ-ಮತದಾನಕ್ಕೆ ಕಡಿವಾಣ ಹಾಕುವ ಸಲುವಾಗಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ರಾಜ್ಯಸಭಾ ಚುನಾವಣೆಯಲ್ಲಿ ಮುಕ್ತ ಮತದಾನದ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಇಂದು ಅದೇ ಪಕ್ಷ ತನ್ನ ಎದುರಾಳಿ ಪಕ್ಷದ ಸದಸ್ಯರ ರಾಜೀನಾಮೆ ಕೊಡಿಸುವ ಸೋಗಿನಲ್ಲಿ ಮಾತೃಪಕ್ಷಕ್ಕೆ ಕಳಂಕ ತರುವ ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಇದು ಬಹುಮತದ ಸಮತೋಲನದ ಮೇಲೆ ಪ್ರಭಾವ ಬೀರಿ ಬಿಜೆಪಿ ಪರ ಕೆಲಸ ಮಾಡುತ್ತದೆ. ಹೀಗೆ ಆಗುವುದನ್ನು ಖಚಿತವಾಗಿ ಪ್ರಜಾಪ್ರಭುತ್ವ ವಿರೋಧಿ ಎಂದು ಕರೆಯಬಹುದು.
ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಏಕಪಕ್ಷೀಯ ನಿರ್ಧಾರಗಳ ಮೂಲಕ ಸವೆದು ಹೋಗಿದ್ದ ಕಾಂಗ್ರೆಸ್ಗೆ ಪರ್ಯಾಯವಾಗಿ ಹುಟ್ಟಿಕೊಂಡ ಕಮಲ ಪಾಳಯ ಕೈ ಪಕ್ಷವನ್ನು ವ್ಯವಸ್ಥಿತವಾಗಿ ಕಳಚಿಹಾಕಿದೆ. ಪಕ್ಷದ ಆರಂಭಿಕ ಘಟ್ಟದಲ್ಲಿ, ವಾಜಪೇಯಿ ಅವರು ಅಧಿಕಾರ ಆಧಾರಿತ ರಾಜಕಾರಣವನ್ನು ಆದರ್ಶ ರಾಜಕಾರಣವಾಗಿಯೂ, ಅವಕಾಶವಾದಿ ರಾಜಕಾರಣವನ್ನು ಸೈದ್ಧಾಂತಿಕ ರಾಜಕಾರಣವಾಗಿಯೂ, ಮೋಸದ ರಾಜಕಾರಣವನ್ನು ಉದಾತ್ತ ರಾಜಕಾರಣವಾಗಿಯೂ ಪರಿವರ್ತಿಸುವುದು ತಮ್ಮ ಇಚ್ಛೆ ಆಗಿದೆ ಎಂದು ಘೋಷಿಸಿದರು. ಈಗಲೂ ಕೂಡ ಕಮಲ ಪಕ್ಷ ಈ ಆದರ್ಶಗಳನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯ ಪಡೆದಿದೆ ಎಂಬುದರಲ್ಲಿ ಸಂದೇಹವಿಲ್ಲ. ರಾಷ್ಟ್ರದ ಪ್ರಗತಿಯ ಮೇಲೆ ಭ್ರಷ್ಟ ರಾಜಕೀಯ ವ್ಯವಸ್ಥೆಯ ಗ್ರಹಣ ಬಡಿದಿರುವ ಹೊತ್ತಿನಲ್ಲಿ ತನ್ನ ಪಕ್ಷದ ಆದರ್ಶಗಳ ಮೂಲಕ ಅನೈತಿಕ ರಾಜಕಾರಣದಲ್ಲಿ ತೊಡಗಿರುವ ತಿಮಿಂಗಿಲಗಳ ವಿರುದ್ಧ ಅದು ಹೋರಾಡಬೇಕಿದೆ. ಆ ಮೂಲಕ ದೇಶಕ್ಕೆ ಉಜ್ವಲ ಭವಿಷ್ಯ ಮರಳಿ ತರುವುದು ಬಿಜೆಪಿಯ ಕೆಲಸ ಆಗಬೇಕಿದೆ. ಮಹಾತ್ಮ ಗಾಂಧಿಯವರು ಹೇಳಿರುವ ಏಳು ಮಹಾ ಪಾಪಗಳಲ್ಲಿ ‘ಅನೈತಿಕ ರಾಜಕಾರಣ’ ಕೂಡ ಒಂದು. ಚುನಾವಣಾ ಆಯುಕ್ತರಾಗಿದ್ದ ಟಿಎನ್ ಶೇಷನ್ ಹೇಳಿಕೊಂಡಂತೆ, ಚುನಾವಣಾ ವ್ಯವಸ್ಥೆಯು ವಿಶ್ವದ ಹತ್ತು ದೊಡ್ಡ ಪಾಪಗಳಲ್ಲಿ ಸಿಕ್ಕಿಹಾಕಿಕೊಂಡರೆ, ರಾಜಕೀಯವನ್ನು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿರುವ ಬಿಜೆಪಿಯಂತಹ ಸೈದ್ಧಾಂತಿಕ ಪಕ್ಷವು ಮುಂದೆ ಬಂದು ರಾಷ್ಟ್ರದ ಮೌಲ್ಯಗಳು ಮತ್ತು ಸಮಗ್ರ ಅಭಿವೃದ್ಧಿಗೆ ಹೋರಾಡಿದಾಗ ಮಾತ್ರ ಅದನ್ನು ಮುಕ್ತಗೊಳಿಸಬಹುದು. ಬಿಜೆಪಿ ರೀತಿಯ ಪಕ್ಷ ಅಧಿಕಾರ ದುರಾಸೆಗೆ ಬಲಿಯಾದರೆ, ಅದು ಇತರರಿಗಿಂತ ಭಿನ್ನವಾಗಿ ಕಾಣಲು ಹೇಗೆ ಸಾಧ್ಯ? ಅಂತಹ ಸನ್ನಿವೇಶದಲ್ಲಿ, ದೇಶದಲ್ಲಿ ಪ್ರಜಾಪ್ರಭುತ್ವದ ಭವಿಷ್ಯ ಏನು?