ಹೈದರಾಬಾದ್ :ಕೊರೊನಾ ವೈರಸ್ ಹಾಗೂ ಲಾಕ್‌ಡೌನ್ ನಡುವೆಯೂ ನಿರುದ್ಯೋಗ ಪ್ರಮಾಣ ಅತ್ಯಂತ ವೇಗದ ಕುಸಿತಕ್ಕೆ 2020ರ ಜೂನ್ ಸಾಕ್ಷಿಯಾಗುತ್ತಿದೆ. ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ನಿರುದ್ಯೋಗ ಏರಿಕೆಯಾಗಿರುವಾಗ ಈ ಪ್ರಮಾಣದಲ್ಲಿನ ಕುಸಿತವು ನಾಟಕೀಯ ಬೆಳವಣಿಗೆಯಂತೆ ಗೋಚರಿಸುತ್ತಿದೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ. 23.5ರಷ್ಟಿದ್ದ ನಿರುದ್ಯೋಗ ಪ್ರಮಾಣವು, ಜೂನ್ ಮೊದಲ ವಾರದಲ್ಲಿ ಶೇ. 17.5ಕ್ಕಿಳಿದಿದೆ. ನಂತರ 2ನೇ ವಾರದಲ್ಲಿ ಶೇ.11.6ಕ್ಕಿಳಿಯುವ ಮೂಲಕ ಈ ದರದಲ್ಲಿ ತೀವ್ರ ಕುಸಿತ ಕಂಡಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ವರದಿಯ ಪ್ರಕಾರ, ಕಾರ್ಮಿಕ ಭಾಗವಹಿಸುವಿಕೆಯ ದರದಲ್ಲಿ ಹೆಚ್ಚಳವಾಗಿದೆ. ನಿರುದ್ಯೋಗ ದರದ ಕುಸಿತವು ದುಪ್ಪಟ್ಟಾಗಿದೆ.
ಜೂನ್ 14ರ ವೇಳೆಗೆ ಕಾರ್ಮಿಕರ ಭಾಗವಹಿಸುವಿಕೆಯ ಪ್ರಮಾಣ ಶೇ. 40.4ರಷ್ಟಿತ್ತು. ಈ ಕಾರ್ಮಿಕ ಭಾಗವಹಿಸುವಿಕೆಯ ದರ(LPR)ವು ಏಪ್ರಿಲ್ ಕೊನೆಯ ವಾರದಿಂದ ಚೇತರಿಸಿಕೊಳ್ಳುತ್ತಿದೆ. ಮೇ ಆರಂಭದಲ್ಲಿ ಶೇ. 36ರಷ್ಟಿದ್ದ ಈ ಪ್ರಮಾಣ ಚೇತರಿಕೆ ಕಂಡ ಬಳಿಕ ಜೂನ್ 14 ವಾರದಲ್ಲಿ ಶೇ. 40.4ಕ್ಕೆ ಬಂದು ತಲುಪಿದೆ. ಕಾರ್ಮಿಕ ಭಾಗವಹಿಸುವಿಕೆಯ ದರದ ಹೆಚ್ಚಳವು ನಿರುದ್ಯೋಗ ಪ್ರಮಾಣದ ಕುಸಿತದೊಂದಿಗೆ ಉದ್ಯೋಗ ಪ್ರಮಾಣದ ಹೆಚ್ಚಳ ಸೂಚಿಸುತ್ತದೆ. ಉದ್ಯೋಗ ಪ್ರಮಾಣದ ಹೆಚ್ಚಳವು ಅಪೇಕ್ಷಿತ ಫಲಿತಾಂಶವಾಗಿದೆ. ಇದು ನಿರುದ್ಯೋಗ ದರಕ್ಕಿಂತ ಆರ್ಥಿಕತೆಯ ಆರೋಗ್ಯದ ಪ್ರಮುಖ ಸೂಚಕವಾಗಿದೆ.