ಶ್ರೀನಗರ: ಕೊರೊನಾ ವೈರಸ್ ಹರಡುತ್ತಿರುವ ಈ ಸಂದರ್ಭದಲ್ಲಿ ಸೈಬರ್ ದಾಳಿಗಳೂ ಹೆಚ್ಚುತ್ತಿದ್ದು, ಇದೀಗ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಸರ್ಕಾರಿ ಇಲಾಖೆಯೊಂದು ರಾನ್ಸಮ್‌ವೇರ್ ವೈರಸ್ ದಾಳಿಗೆ ಒಳಗಾಗಿದೆ.
ಜಮ್ಮು- ಕಾಶ್ಮೀರದ ವಿದ್ಯುತ್ ಅಭಿವೃದ್ಧಿ ಇಲಾಖೆ (ಪಿಡಿಡಿ)ಯ ನಾಲ್ಕು ಡೇಟಾಬೇಸ್ ಸರ್ವರ್‌ಗಳ ಮೇಲೆ ರಾನ್ಸಮ್‌ವೇರ್ ವೈರಸ್ ದಾಳಿ ನಡೆಸಿದ್ದು, ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈಟಿವಿ ಭಾರತದೊಂದಿಗೆ ವಿದ್ಯುತ್ ಅಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ಮಾತು ಈಟಿವಿ ಭಾರತದೊಂದಿಗೆ ಮಾತನಾಡಿದ ಇಲಾಖೆಯ ಮುಖ್ಯ ಇಂಜಿನಿಯರ್ ಅಜಾಜ್ ದಾರ್, ಬುಧವಾರ ಮುಂಜಾನೆ 4: 45ರ ವೇಳೆಗೆ ಶ್ರೀನಗರದಲ್ಲಿರುವ ಇಲಾಖೆಯ ದತ್ತಾಂಶ ಕೇಂದ್ರದಲ್ಲಿ ನಾಲ್ಕು ಡೇಟಾಬೇಸ್ ಸರ್ವರ್‌ಗಳು ರಾನ್ಸಮ್‌ವೇರ್ ವೈರಸ್ ದಾಳಿಗೆ ಒಳಗಾಗಿದ್ದು ತಿಳಿದು ಬಂದಿದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಗ್ರಾಹಕರ ಡೇಟಾ ಸುರಕ್ಷಿತವಾಗಿದೆ. ಈ ತಿಂಗಳ ಬಿಲ್ಲಿಂಗ್ ಪ್ರಕ್ರಿಯೆ ಈಗಾಗಲೇ ಮುಗಿದಿರುವುದರಿಂದ ಗ್ರಾಹಕರ ಡೇಟಾ ಮೇಲೆ ಸೈಬರ್ ದಾಳಿ ಪರಿಣಾಮ ಬೀರುವುದಿಲ್ಲ. ಆದರೆ ಆನ್‌ಲೈನ್ ಪಾವತಿಗಳು ಸದ್ಯಕ್ಕೆ ಸಾಧ್ಯವಿಲ್ಲ. ಗ್ರಾಹಕರು ಬ್ಯಾಂಕುಗಳಲ್ಲಿ ಆಫ್‌ಲೈನ್ ಮೋಡ್ ಮೂಲಕ ಬಿಲ್‌ಗಳನ್ನು ಪಾವತಿಸಬೇಕಾಗುತ್ತದೆ ಎಂದು ಅಜಾಜ್ ದಾರ್ ತಿಳಿಸಿದ್ದಾರೆ.
ಇದು ರಾನ್ಸಮ್‌ವೇರ್ ದಾಳಿಯಾಗಿದ್ದು, ಹೆಚ್ಚಾಗಿ ಆನ್‌ಲೈನ್ ವಂಚನೆಗಳಿಗಾಗಿ ಮಾಡಲಾಗುತ್ತದೆ. ಚೀನಾದ ಹ್ಯಾಕರ್ಗಳ ಕೃತ್ಯ ಇದಾಗಿದೆಯಾ ಎಂಬುದರ ಕುರಿತು ಮಾಹಿತಿಯಿಲ್ಲ. ಆದರೆ ಇದರ ಉದ್ದೇಶ ಮಾತ್ರ ಒಳ್ಳೆಯದ್ದಲ್ಲ. ಇ-ಮೇಲ್ ಬಳಸಿ ಪ್ರಮುಖ ಮಾಹಿತಿಯನ್ನು ಹ್ಯಾಕರ್ ಪಡೆದುಕೊಳ್ಳುತ್ತಾನೆ ಎಂದು ಸೈಬರ್ ಸೆಲ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಗಡಿ ಸಂಘರ್ಷದ ಬಳಿಕ ಭಾರತ ವಿವಿಧ ಕ್ಷೇತ್ರಗಳ ಮೇಲೆ ಸೈಬರ್ ದಾಳಿ ನಡೆಸಲು ಮುಂದಾಗಿದ್ದು, 40,000 ಕ್ಕೂ ಹೆಚ್ಚು ದಾಳಿ ನಡೆಸಲು ಚೀನಾ ಯತ್ನಿಸಿದೆ ಎಂದು ಮಹಾರಾಷ್ಟ್ರದ ಸೈಬರ್ ಸೆಲ್‌ನ ಪೊಲೀಸ್ ಅಧಿಕಾರಿ ಈ ಹಿಂದೆ ಎಚ್ಚರಿಕೆ ನೀಡಿದ್ದರು.