ನವದೆಹಲಿ:ಮಂಗಳವಾರ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳ ಪರ- ವಿರೋಧಗಳ ನಡುವೆಯೂ ವಿಶೇಷ ಭದ್ರತಾ ಪಡೆ(ಎಸ್ಪಿಜಿ) ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಿದೆ.
ಮಂಗಳವಾರ ರಾಜ್ಯಸಭೆಯಲ್ಲಿ ಎಸ್ಪಿಜಿ ಮಸೂದೆ ತಿದ್ದುಪಡಿ ಅಂಗೀಕರವಾದ ನಂತರ ನೆಹರೂ ಕುಟುಂಬಕ್ಕೆ ಎಸ್ಪಿಜಿ ರದ್ದುಗೊಳಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಹಾಗೂ ಎಡಪಕ್ಷಗಳಿಗೆ ಉತ್ತರ ನೀಡಿದ ಅಮಿತ್ ಶಾ, ಗಾಂಧಿ ಕುಟುಂಬಕ್ಕೆ ಎಸ್ಪಿಜಿ ಭದ್ರತೆಯನ್ನು ಹಿಂತೆಗೆದುಕೊಂಡು ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಗೃಹ ಮಂತ್ರಿ ಹಾಗೂ ರಕ್ಷಣಾ ಮಂತ್ರಿಗೆ ನೀಡುವ ಜೆಡ್ ಪ್ಲಸ್ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಎಸ್ಪಿಜಿ ಕೇವಲ ದೇಶದ ಪ್ರಧಾನಿಯಾದವರಿಗೆ ಮಾತ್ರ. ಅದೂ ಅವರ ಅಧಿಕಾರವಾಧಿ ಮುಗಿದ ನಂತರದ 5 ವರ್ಷಗಳ ಅವಧಿಗೆ ಈ ಸೇವೆ ದೊರೆಯುತ್ತದೆ. 5 ವರ್ಷಗಳ ನಂತರ ಅವರಿಗೂ ಎಸ್ಪಿಜಿ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗುತ್ತದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಅಲ್ಲದೆ ನಮ್ಮ ಸರ್ಕಾರ ಯಾರ ವಿರುದ್ಧವೂ ಪ್ರತಿಕಾರದ ಉದ್ದೇಶ ಹೊಂದಿಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಕೂಡ ಇಂತಹದ್ದೇ ಕ್ರಮ ಕೈಗೊಂಡಿತ್ತು, ಮಾಜಿ ಪ್ರಧಾನಿಗಳಾದ ಪಿ.ವಿ ನರಸಿಂಹರಾವ್, ಐ.ಕೆ. ಗುಜ್ರಾಲ್, ಹೆಚ್.ಡಿ ದೇವೇಗೌಡ ಹಾಗೂ ಇತ್ತೀಚೆಗೆ ಮನಮೋಹನ್ ಸಿಂಗ್ ಅವರಿಗೆ ನೀಡಿದ್ದ ಎಸ್ಪಿಜಿ ಭದ್ರತಾ ವ್ಯವಸ್ಥೆಯನ್ನು ಹಿಂಪಡೆದಾಗ ನಡೆಯದ ವಿರೋಧ ಗಾಂಧಿ ಕುಟುಂಬದ ವಿಚಾರದಲ್ಲಿ ವಿರೋಧ ಏಕೆ ಎಂದು ಪ್ರಶ್ನಿಸಿದರು. ಗಾಂಧಿ ಕುಟುಂಬ ಮಾತ್ರವಲ್ಲ 130 ಕೋಟಿ ಭಾರತೀಯರಿಗೆ ರಕ್ಷಣೆ ಒದಗಿಸಿಕೊಡುವುದು ಸರ್ಕಾರದ ಜವಾಬ್ದಾರಿ ಎಂದು ಶಾ ವಿರೋಧ ಪಕ್ಷ ಟೀಕೆಗೆ ಉತ್ತರ ನೀಡಿದ್ದಾರೆ.
ಡಿಸೆಂಬರ್ 2 ರಂದು ಪ್ರಿಯಾಂಕಾ ಅವರ ಮನೆಯಲ್ಲಿ ನಡೆದ ಭದ್ರತಾ ವೈಫಲ್ಯದ ಬಗ್ಗೆ ಪ್ರತಿಕ್ರಿಯಿಸಿ, ಅಂದು ಕಪ್ಪು ಬಣ್ಣದ ಕಾರಿನಲ್ಲಿ ಪ್ರಿಯಾಂಕ ಮನೆಗೆ ಸಹೋದರ ರಾಹುಲ್ ಗಾಂಧಿ ಬರಲಿದ್ದಾರೆ ಎಂಬ ಮಾಹಿತಿಯನ್ನು ಭದ್ರತಾ ಪಡೆಯ ಸಿಬ್ಬಂದಿಗೆ ನೀಡಲಾಗಿತ್ತು. ಆದರೆ, ಅದೇ ಸಮಯದಲ್ಲಿ ಕಪ್ಪು ಬಣ್ಣದ ಟಾಟಾ ಸಫಾರಿ ಕಾರಿನಲ್ಲಿ ರಾಹುಲ್ ಬದಲು, ಕಾಂಗ್ರೆಸ್ ಕಾರ್ಯಕರ್ತೆ ಶಾರದ ತ್ಯಾಗಿ ಹಾಗೂ ಮೂವರು ಪ್ರಿಯಾಂಕ ಗಾಂಧಿ ಮನೆಗೆ ಹೋಗಿದ್ದಾರೆ. ರಾಹುಲ್ ಬಂದಿರಬಹುದೆಂದು ಭದ್ರತಾ ಸಿಬ್ಬಂದಿಗಳು ಕಾರನ್ನು ಪರೀಕ್ಷಿಸಲಿಲ್ಲ, ಇಲ್ಲಿ ನಡೆದ ಭದ್ರತಾ ವೈಫಲ್ಯ ಕೇವಲ ಕಾಕಾತಾಳೀಯ ಅಷ್ಟೆ ಎಂದು ಶಾ ಸ್ಪಷ್ಟನೇ ನೀಡಿದ್ದಾರೆ.