ಚೆನ್ನೈ: ಮಹಿಳೆಯರ ಎದುರು ನಿಂತು, ಅವರ ಪ್ರಶ್ನೆಗಳನ್ನು ಎದುರಿಸುವ ಧೈರ್ಯ ಪ್ರಧಾನಿಗಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಚಾಯಿಸಿದರು.
ಲೋಕಸಭೆ ಚುನಾವಣೆ ನಿಮಿತ್ತ ತಮಿಳುನಾಡಿಗೆ ಭೇಟಿ ನೀಡಿರುವ ಅವರು, ಚೆನ್ನೈನ ಸ್ಟೆಲ್ಲಾ ಮಾರೀಸ್ ಕಾಲೇಜಿನಲ್ಲಿ ಮಹಿಳೆಯರನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.
ನನ್ನಂತೆ 3000 ಮಹಿಳೆಯರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ನಿಂತಿದ್ದನ್ನು ಎಷ್ಟು ಬಾರಿ ನೋಡಿದ್ದೀರಾ? ಬಹಿರಂಗವಾಗಿ ಪ್ರಧಾನಿ ಪ್ರಶ್ನೆ ಎದುರಿಸಿದ್ದನ್ನು ನೀವು ನೋಡಿದ್ದೀರಾ? ಎಂದು ಸಭಿಕರನ್ನು ಪ್ರಶ್ನಿಸುತ್ತಲೇ ಪ್ರಧಾನಿ ವಿರುದ್ಧ ಕುಟುಕಿಯಾಡಿದರು.
ನಿಮ್ಮಲ್ಲಿ ಎಷ್ಟು ಮಂದಿ ಪ್ರಧಾನಿಗೆ ಶಿಕ್ಷಣದ ಬಗ್ಗೆ, ವಿವಿಧ ವಿಚಾರಗಳ ಬಗ್ಗೆ ಪ್ರಶ್ನೆ ಕೇಳಲು ಅವಕಾಶ ಸಿಕ್ಕಿದೆ? ನಿಮ್ಮ ನಡುವೆ ನಿಂತು, ಪ್ರಶ್ನೆಗಳಿಗೆ ಉತ್ತರ ನೀಡುವ ಗಟ್ಸ್ ಪ್ರಧಾನಿಗೇಕಿಲ್ಲ ಎಂದು ಛೇಡಿಸಿದರು.
ದೇಶದಲ್ಲಿ ನಡೆಯುತ್ತಿರುವ ಚುನಾವಣೆ ಸೈದ್ದಾಂತಿಕ ಹೋರಾಟವಾಗಿದೆ. ಒಂದು ಸಿದ್ಧಾಂತ ಇಡೀ ದೇಶದ ಜನರು ಒಟ್ಟಾಗಿ ಬಾಳಬೇಕು ಹಾಗೂ ಒಂದೇ ತತ್ವದಿಂದ ದಬ್ಬಾಳಿಕೆಗೆ ಒಳಗಾಗಬಾರದು ಎಂದು ಹೇಳುತ್ತದೆ. ಮತ್ತೊಂದು ಸಿದ್ಧಾಂತ ಇಂದಿನ ಕೇಂದ್ರ ಸರ್ಕಾರ ಹಾಗೂ ಪ್ರಧಾನಿಗಳಂತೆ, ಒಂದೇ ತತ್ವವನ್ನು ಹೇರುವಂತದ್ದು. ಅವರಿಗೆ ಮಹಿಳೆಯರ ಬಗ್ಗೆ ಒಂದೇ ಥರನಾದ ಭಾವನೆ ಇದೆ. ವೈವಿಧ್ಯಮಯ ಭಾಷೆ ಹಾಗೂ ಸಂಸ್ಕೃತಿಗಳ ಬದಲು ಒಂದೇ ಸಂಸ್ಕೃತಿ, ತತ್ವದಡಿ ಕೇಂದ್ರೀಕರಿಸುವ ಯೋಚನೆ ಇದೆ ಎಂದು ಟೀಕಿಸಿದರು.
ಸರ್ಕಾರಕ್ಕೆ ಎಲ್ಲರನ್ನೂ ತನಿಖೆಗೆ ಒಳಪಡಿಸುವ ಅಧಿಕಾರವಿದೆ. ಸರ್ಕಾರಿ ದಾಖಲೆಗಳಲ್ಲಿ ಪ್ರಧಾನಿ ಮೋದಿ ಹೆಸರು ಇದೆ ಎಂದ ಮೇಲೆ ರಫೇಲ್ ವಿಚಾರವಾಗಿ ಅವರು ಡಸಾಲ್ಟ್ನೊಂದಿಗೆ ಮಾತುಕತೆ ನಡೆಸಿದ್ದರು ಎಂದರ್ಥ. ವಾದ್ರಾ ಆಗಲೀ, ಪ್ರಧಾನಿಯಾಗಲೀ ಎಲ್ಲರ ತನಿಖೆ ನಡೆಯಬೇಕು ಎಂದು ಹೇಳಿದರು.