ಪುಣೆ:ಲಾಕ್ಡೌನ್ನಿಂದಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಹೀಗಾಗಿ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ. ಇದರ ಮಧ್ಯೆ ವಲಸೆ ಕಾರ್ಮಿಕರ ಸ್ಥಿತಿ ಹೇಳಲು ತೀರದು.
ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಲು ಹೋಗಿ ಉಳಿದುಕೊಂಡಿರುವ ವಲಸೆ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ಮೇಲೆ ಕೋವಿಡ್-19 ಗಂಭೀರ ಪರಿಣಾಮ ಬೀರಿದ್ದು, ಒಂದು ಹೊತ್ತಿನ ಊಟ ಮಾಡಲು ಅವರು ಪರದಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಹೀಗಾಗಿ ನಡೆದುಕೊಂಡು ಹೋಗಿ ಮನೆ ಸೇರಲು ನಿರ್ಧರಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ವಲಸೆ ಕಾರ್ಮಿಕರು ಬರೋಬ್ಬರಿ 1,300 ಕಿಲೋ ಮೀಟರ್ ನಡೆದುಕೊಂಡು ಹೋಗಲು ನಿರ್ಧರಿಸಿ, ನಿನ್ನೆ ರಾತ್ರಿ ರೂಂ ಬಿಟ್ಟಿದ್ದಾರೆ. ಕೈಯಲ್ಲಿ ಕೆಲಸವಿಲ್ಲದ ಕಾರಣ ಒಂದು ಹೊತ್ತಿನ ಊಟಕ್ಕೂ ಅವರು ತೊಂದರೆ ಪಡುತ್ತಿದ್ದು, ಹೇಗಾದ್ರೂ ಮಾಡಿ ಮನೆ ಸೇರಿಕೊಂಡಿರೆ ಸಾಕು ಎಂಬುದು ಅವರ ಇರಾದೆಯಾಗಿದೆ.
ಕಳೆದ ಐದು ದಿನಗಳಿಂದ ಒಂದೇ ಹೊತ್ತಿನ ಊಟ ಮಾಡುತ್ತಿರುವ ಅವರು, ಈಗಾಗಲೇ ಹೆಗಲ ಮೇಲೆ ದೊಡ್ಡ ದೊಡ್ಡ ಲಗೇಜ್ ಹೊತ್ತು ಊರಿನ ಕಡೆ ಕಾಲ್ನಡಿಗೆ ಮೂಲಕ ಪ್ರಯಾಣ ಆರಂಭಿಸಿದ್ದಾರೆ. ಇದರ ಮಧ್ಯೆ ಗಂಭೀರ ಆರೋಪ ಮಾಡಿರುವ ಅವರು, ರೈಲುಗಳಲ್ಲಿ ಹೋಗಬೇಕು ಎಂದು ನಾನು ಫಾರ್ಮ್ ತುಂಬಿದ್ರೂ ಅವುಗಳನ್ನ ತಗೆದುಕೊಳ್ಳುತ್ತಿಲ್ಲ. ಸರಿಯಾಗಿ ಊಟ ಇಲ್ಲ. ಖರ್ಚು ಮಾಡಲು ಹಣ ಕೂಡ ಇಲ್ಲ. ರಸ್ತೆ ಹಿಡಿದು ನಾವು ಊರಿಗೆ ತೆರಳುತ್ತಿದ್ದು, ಮುಂದೆ ಏನು ಆಗ್ತದೆ ಎಂದು ಗೊತ್ತಿಲ್ಲ. ಒಂದು ವೇಳೆ ನಮ್ಮ ಹಳ್ಳಿ ಮುಟ್ಟಿದರೆ ಅಲ್ಲಿರುವ ಹೊಲದಲ್ಲೇ ಏನಾದ್ರೂ ಬೆಳೆದು ಊಟ ಮಾಡುತ್ತೇವೆ ಎಂದಿದ್ದಾರೆ.
ರಾಜ್ಯದ ವಿವಿಧ ಕಡೆ ಉಳಿದುಕೊಂಡಿರುವ ವಲಸೆ ಕಾರ್ಮಿಕರು ಇದೀಗ ರಸ್ತೆ, ರೈಲ್ವೆ ಹಳಿ ಮೂಲಕವೇ ನಡೆದುಕೊಂಡು ಹೋಗಿ ತಮ್ಮ ಊರು ಸೇರಿಕೊಳ್ಳುತ್ತಿದ್ದಾರೆ.