ನವದೆಹಲಿ: ಲೋಕಸಭೆ ಕ್ಷೇತ್ರಗಳಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರ ವಾರಣಾಸಿ ಕ್ಷೇತ್ರ ಎಲ್ಲರ ಕುತೂಹಲದ ಕೇಂದ್ರ ಬಿಂದು. ವಾರಣಾಸಿಯಲ್ಲಿ ಮೋದಿ ಎದುರು ಯಾರೆಲ್ಲಾ ಸ್ಪರ್ಧಿಸುತ್ತಾರೆ ಎಂಬ ಸಹಜ ಕುತೂಹಲ ಜನರಿಗಿದ್ದೇ ಇರುತ್ತದೆ. ಅಂದಹಾಗೆ, ಈ ಬಾರಿ ಮೋದಿ ಎದುರು ಮೋದಿ ಸ್ಪರ್ಧಿಸುತ್ತಿದ್ದಾರೆ..!
ಏನಿದು ಎಂದು ಯೋಚಿಸುತ್ತಿದ್ದೀರಾ. ಪ್ರಧಾನಿ ಮೋದಿ ಎದುರು ಮತ್ತೊಬ್ಬರು ಮೋದಿ ಸ್ಪರ್ಧಿಸುತ್ತಿದ್ದಾರೆ. ಇವರು ಮೋದಿಯ ಅಪರಾವತಾರದಂತೆಯೇ ಇದ್ದಾರೆ. ಬಿಜೆಪಿ ಪ್ರಚಾರಕನಾಗಿದ್ದ ಈ ವ್ಯಕ್ತಿ ಇದೀಗ ಮೋದಿ ಎದುರು ಕಣಕ್ಕಿಳಿದಿದ್ದಾರೆ.
ಅಭಿನಂದನ್ ಪಠಾಖ್ ಎಂಬ ಇವರು ನೋಡಲು ಪ್ರಧಾನಿ ಮೋದಿ ಅಂತೆ ಇದ್ದಾರೆ. ಅವರಂತೆ, ವೇಷಭೂಷಣವನ್ನೂ ಮಾಡಿಕೊಳ್ತಾರೆ. ಮೋದಿ ಧ್ವನಿ ಅನುಕರಿಸಿ ಮಾತಾಡ್ತಾರೆ. ಈ ಬಾರಿ ವಾರಣಾಸಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಏಪ್ರಿಲ್ 26ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ. ನಾನೇನು ಡಮ್ಮಿ ಕ್ಯಾಂಡಿಡೇಟ್ ಅಲ್ಲ. ನಾನು ಯಾರ ವಿರುದ್ಧವೂ ನಿಂತಿಲ್ಲ. ಆದರೆ ಜುಮ್ಲಾ (ಸುಳ್ಳು ಭರವಸೆ)ಯನ್ನು ವಿರೋಧೀಸುತ್ತೇನೆ. ಗೆದ್ದ ನಂತರ ರಾಹುಲ್ ಗಾಂಧಿಗೆ ಬೆಂಬಲ ಸೂಚಿಸುತ್ತೇನೆ ಎಂದು ಪಠಾಖ್ ಹೇಳಿದ್ದಾರೆ.
ನಾನು ಮೋದಿಯಂತೆ ಕಾಣುವುದರಿಂದ ಜನರು ನನ್ನ ಬಳಿ ಬಂದು ಅಚ್ಛೇ ದಿನ್ ಯಾವಾಗ ಎಂದು ಕೇಳುತ್ತಾರೆ. ಸಾಮಾನ್ಯ ಜನರ ಕಷ್ಟಗಳನ್ನು ಕಂಡು ಮರುಕಪಟ್ಟಿದ್ದೇನೆ. ಅದಕ್ಕಾಗಿಯೇ ಬಿಜೆಪಿ ಮಿತ್ರಪಕ್ಷ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ತೊರೆದು ಕಾಂಗ್ರೆಸ್ ಸೇರಿದೆ ಎಂದು ಹೇಳಿಕೊಂಡಿದ್ದಾರೆ. ಗೋರಖ್ಪುರದಲ್ಲಿ ಉಪಚುನಾವಣೆ ನಡೆದಾಗ ಬಿಜೆಪಿಗನಾಗಿ ಮನೆ ಮನೆ ಪ್ರಚಾರ ಮಾಡಿದ್ದನ್ನೂ ಅವರು ನೆನಪಿಸಿಕೊಂಡರು.
ಇನ್ನು ವಾರಣಾಸಿಯ ಹಾಲಿ ಸಂಸದರಾಗಿರುವ ಪ್ರಧಾನಿ ಮೋದಿ ಕಾಕತಾಳೀಯವೆಂಬಂತೆ, ಇದೇ ತಿಂಗಳ 26ರಂದು ನಾಮಪತ್ರ ಸಲ್ಲಿಸಲಿದ್ದಾರೆ.