ನವದೆಹಲಿ:ಕೇಂದ್ರ ಸರ್ಕಾರ ರೈತರಿಗೆ ವಾರ್ಷಿಕ ₹ 6 ಸಾವಿರ ನೆರವು ನೀಡುವ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ'ಯನ್ನು ಎಲ್ಲ 14.5 ಕೋಟಿ ರೈತರಿಗೆ ವಿಸ್ತರಿಸುವ ಅಧಿಸೂಚನೆ ಹೊರಡಿಸಿದೆ.
ರೈತರ ಭೂಮಿ ಗಾತ್ರ ಪರಿಗಣಿಸದೇ ಎಲ್ಲರಿಗೂ ಸಮಾನವಾಗಿ ನೆರವು ನೀಡುವುದಾಗಿ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಭರವಸೆ ನೀಡಿತ್ತು. ಕೊಟ್ಟ ಭರವಸೆಯಂತೆ ಮೇ 31ರಂದು ನಡೆದ ಪ್ರಥಮ ಕೇಂದ್ರ ಸಚಿವ ಸಂಪುಟ ಸಭೆ ಇದಕ್ಕೆ ಅನುಮೋದನೆ ನೀಡಿತ್ತು.
ನಿಯಮ ಏನು ಹೇಳುತ್ತೆ?
ಎಂಜಿನಿಯರ್, ವಕೀಲರು, ನಿವೃತ್ತ ಪಿಂಚಣಿದಾರರು, ಮಾಸಿಕ ₹ 10 ಸಾವಿರಕ್ಕಿಂತ ಅಧಿಕ ಮೊತ್ತದ ಪಿಂಚಣಿ ಪಡೆಯುವ ನಿವೃತ್ತರನ್ನು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ ಹೊರಗಿಡಲಾಗಿದೆ.
ಪರಿಷ್ಕೃತ ನೂತನ ಅಧಿಸೂಚನೆಯಿಂದ 2019-20ರಲ್ಲಿ ಅಂದಾಜು ₹ 87,217 ಕೋಟಿ ವೆಚ್ಚವಾಗಲಿದೆ. ಕೇಂದ್ರ ಸರ್ಕಾರ ಇದುವರೆಗೂ 3.66 ಕೋಟಿ ಫಲಾನುಭವಿಗಳನ್ನು ನೋಂದಣಿ ಮಾಡಿಕೊಂಡಿದೆ. ಇದರಲ್ಲಿ 3.03 ಕೋಟಿ ಜನರಿಗೆ ಮೊದಲ ಕಂತಾಗಿ ₹ 2,000 ಮತ್ತು ಅಂದಾಜು 2 ಕೋಟಿ ರೈತರಿಗೆ 2ನೇ ಕಂತಿನ ಹಣ ಲಭಿಸಿದೆ.
ಅರ್ಹ ಫಲಾನುಭವಿ ರೈತರ ಪಟ್ಟಿಯನ್ನು ಸಿದ್ಧಪಡಿಸುವಂತೆ ಕೇಂದ್ರ ಕೃಷಿ ಸಚಿವಾಲಯ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.