ನವದೆಹಲಿ:ಪ್ರಮುಖ ಡಿಜಿಟಲ್ ಪಾವತಿ ಸೇವೆ ಪೇಟಿಎಂ ಆಂಡ್ರಾಯ್ಡ್ ಆಧಾರಿತ, ಪಾಕೆಟ್ ಗಾತ್ರದ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಸಾಧನವನ್ನು ಬಿಡುಗಡೆ ಮಾಡಿದೆ.
ಇದರಲ್ಲಿ ಇಂಟಿಗ್ರೇಟೆಡ್ ಬಿಲ್ಲಿಂಗ್ ಸಾಫ್ಟ್‌ವೇರ್, ಕ್ಯೂಆರ್ ಸ್ಕ್ಯಾನಿಂಗ್‌ಗಾಗಿ ಕ್ಯಾಮೆರಾ ಮತ್ತು 4ಜಿ ಸಿಮ್ ಕಾರ್ಡ್, ವೈ-ಫೈ ಮತ್ತು ಬ್ಲೂಟೂತ್ ಸಂಪರ್ಕದ ಸಾಮರ್ಥ್ಯ ಹೊಂದಿದೆ.
ಈ ಸಾಧನ 499 ರೂ.ಗಳ ಮಾಸಿಕ ಬಾಡಿಗೆಗೆ ಲಭ್ಯವಿದೆ. 'ಪೇಟಿಎಂ ಆಲ್ ಇನ್ ಒನ್ ಪೋರ್ಟಬಲ್ ಆಂಡ್ರಾಯ್ಡ್ ಸ್ಮಾರ್ಟ್ ಪಿಒಎಸ್' ಆದೇಶಗಳನ್ನು ಮತ್ತು ಪಾವತಿಗಳನ್ನು ಸ್ವೀಕರಿಸುತ್ತದೆ.
2021ರಲ್ಲಿ ಈ ಸಾಧನಗಳ ವಿತರಣೆ ಮತ್ತು ಮಾರುಕಟ್ಟೆಗಾಗಿ 100 ಕೋಟಿ ರೂ. ಹೂಡಿಕೆ ಮಾಡುವ ಉದ್ದೇಶವನ್ನು ಹೊಂದಿರುವ ಪೇಟಿಎಂ ಮುಂದಿನ ಕೆಲವು ತಿಂಗಳುಗಳಲ್ಲಿ ಎರಡು ಲಕ್ಷ ಸಾಧನಗಳನ್ನು ಬಿಡುಗಡೆ ಮಾಡಲಿದ್ದು, ಅದು ತಿಂಗಳಿಗೆ 20 ದಶಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸುವ ಸಾಧ್ಯತೆಯಿದೆ.
"ಈ ಕೈಗೆಟುಕುವ ಪಾಕೆಟ್ ಗಾತ್ರದ ಆಂಡ್ರಾಯ್ಡ್ ಪಿಒಎಸ್ ಸಾಧದ ಮೂಲಕ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದ ಹಿಡಿದು ಕಿರಾಣಿ ಅಂಗಡಿಗಳ ವಿತರಣಾ ಸಿಬ್ಬಂದಿಯವರೆಗೆ ಪಾವತಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಸಾಧ್ಯವಾಗುತ್ತದೆ" ಎಂದು ಪೇಟಿಎಂನ ಹಿರಿಯ ಉಪಾಧ್ಯಕ್ಷ ರೇಣು ಸಟ್ಟಿ ಹೇಳಿದರು.
ಈ ಸಾಧನವು 163 ಗ್ರಾಂ ತೂಗುತ್ತದೆ. 12 ಎಂಎಂ ದಪ್ಪವಾಗಿರುತ್ತದೆ ಮತ್ತು 4.5 ಇಂಚಿನ ಟಚ್ ಸ್ಕ್ರೀನ್ ಹೊಂದಿದೆ. ಇದು 4 ಜಿ ಸಿಮ್ ಕಾರ್ಡ್‌ಗಳು, ವೈ-ಫೈಗಳೊಂದಿಗೆ ಕಾರ್ಯನಿರ್ವಹಿಸುತ್ತದೆ.