ನವದೆಹಲಿ:ಕೊರೊನಾ ಪರಿಸ್ಥಿತಿ ಸುಧಾರಿಸದ ಹೊರತು ಅಥವಾ ವೈರಸ್ಗೆ ಲಸಿಕೆ ಸಿದ್ಧವಾಗುವವರೆಗೆ ಶಾಲೆಗಳನ್ನು ಮತ್ತೆ ತೆರೆಯಬಾರದು ಎಂದು ಒತ್ತಾಯಿಸಿ ದೇಶಾದ್ಯಂತ 2 ಲಕ್ಷಕ್ಕೂ ಹೆಚ್ಚು ಪೋಷಕರು ಮನವಿ ಪತ್ರಕ್ಕೆ ಸಹಿ ಹಾಕುವ ಮೂಲಕ ಸರ್ಕಾರವನ್ನು ಎಚ್ಚರಿಸಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಕೊರೊನಾ ಪರಿಸ್ಥಿತಿಯನ್ನು ಚರ್ಚಿಸಿದ ಬಳಿಕ ಶಾಲಾ-ಕಾಲೇಜುಗಳು, ತರಬೇತಿ ಕೇಂದ್ರಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಜುಲೈನಲ್ಲಿ ಮತ್ತೆ ತೆರೆಯಲಾಗುವುದು ಎಂದು ಸರ್ಕಾರ ತಿಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಜುಲೈನಲ್ಲಿ ಶಾಲೆಗಳನ್ನು ತೆರೆಯುವುದು ಸರ್ಕಾರದ ಕೆಟ್ಟ ನಿರ್ಧಾರ. ಕೊರೊನಾದೊಂದಿಗೆ ನಾವು ಸಂಪೂರ್ಣ ಬಲದಿಂದ ಹೋರಾಡಬೇಕಿದ್ದಾಗ ಸರ್ಕಾರ ಬೆಂಕಿಯೊಂದಿಗೆ ಆಡುವ ಪ್ರಯತ್ನ ಮಾಡುತ್ತಿದೆ. ಪ್ರಸ್ತುತ ಶೈಕ್ಷಣಿಕ ವರ್ಷವು ಇ-ಲರ್ನಿಂಗ್ ರೀತಿಯಲ್ಲಿ ಮುಂದುವರೆಯಬೇಕು. ವರ್ಚುವಲ್ ಕಲಿಕೆಯ ಮೂಲಕ ಉತ್ತಮ ಕೆಲಸವಾಗುತ್ತಿದೆ ಎಂದು ಶಾಲೆಗಳೇ ಹೇಳುತ್ತಿರುವಾಗ ಉಳಿದ ಶೈಕ್ಷಣಿಕ ವರ್ಷದಲ್ಲಿ ಅದನ್ನೇ ಯಾಕೆ ಮುಂದುವರೆಸಬಾರದು ಎಂದು ಅರ್ಜಿಯಲ್ಲಿ 2.13 ಲಕ್ಷಕ್ಕೂ ಹೆಚ್ಚು ಪೋಷಕರು ಸಹಿ ಹಾಕುವ ಮೂಲಕ ತಿಳಿಸಿದ್ದಾರೆ.
ಕೊರೊನಾ ಲಾಕ್ಡೌನ್ ಭಾಗವಾಗಿ ಮಾರ್ಚ್ 16ರಿಂದ ದೇಶಾದ್ಯಂತ ವಿಶ್ವವಿದ್ಯಾಲಯಗಳು ಹಾಗೂ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಶಾಲೆಗಳು, ಕಾಲೇಜುಗಳು, ತರಬೇತಿ ಸಂಸ್ಥೆಗಳು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ತೆರೆಯಲಾಗುತ್ತದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತ ವರ್ಗವು ಪೋಷಕರೊಂದಿಗೆ ಸಂಸ್ಥೆಯ ಮಟ್ಟದಲ್ಲಿ ಸಮಾಲೋಚನೆ ನಡೆಸಬಹುದು. ಅವರಿಂದ ಬಂದ ಪ್ರತಿಕ್ರಿಯೆಯ ಆಧಾರದ ಮೇಲೆ 2020ರ ಜುಲೈ ತಿಂಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವಾಲಯ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ಸದ್ಯ ಸರ್ಕಾರದ ಈ ನಿಧಾರದಿಂದ ಮಕ್ಕಳ ಪೋಷಕರು ಕಂಗಾಲಾಗಿದ್ದು, ಯಾವುದೇ ಕಾರಣಕ್ಕೂ ಶಾಲಾ-ಕಾಲೇಜುಗಳನ್ನು ಮತ್ತೆ ತೆರೆಯಬಾರದು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.