ನವದೆಹಲಿ:ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿದ್ದ ಹಿಂದೂ ಸಮುದಾಯದ 11 ಜನರ ಸಾವನ್ನು ಪಾಕ್ ತನ್ನ ಭಾರತ ವಿರೋಧಿ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪಾಕಿಸ್ತಾನದ ಹಿಂದೂ ವಲಸಿಗರ ಕುಟುಂಬದ 11 ಸದಸ್ಯರು ಆಗಸ್ಟ್‌ನಲ್ಲಿ ರಾಜಸ್ಥಾನದ ಜೋಧಪುರ ಜಿಲ್ಲೆಯ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಭಿಲ್ ಸಮುದಾಯಕ್ಕೆ ಸೇರಿದ ಈ ಕುಟುಂಬವು 2015ರಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಭಾರತಕ್ಕೆ ದೀರ್ಘಾವಧಿಯ ವೀಸಾದಲ್ಲಿ ಬಂದಿತ್ತು. ಅವರು ಕಳೆದ ಆರು ತಿಂಗಳಿನಿಂದ ಲೋಡ್ಡಾ ಗ್ರಾಮದ ಜಮೀನಿನಲ್ಲಿ ವಾಸಿಸುತ್ತಿದ್ದರು.
ಇಸ್ಲಾಮಾಬಾದ್‌ನ ಭಾರತೀಯ ಹೈಕಮಿಷನ್ ಬಳಿ ಭಾರತದ ವಿರುದ್ಧ ಪ್ರತಿಭಟನೆಯ ಬಗ್ಗೆ ವರದಿಯಾಗಿದ್ದು, ಭಾರತೀಯ ಹೈಕಮಿಷನ್ ಮತ್ತು ಅದರ ಸಿಬ್ಬಂದಿಯ ಸುರಕ್ಷತೆ ಪಾಕಿಸ್ತಾನದ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.